ಲಾಸ್ ಏಂಜಲೀಸ್: ಸಂಗೀತ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿಯಾದ "ಗ್ರ್ಯಾಮಿ" ಪ್ರದಾನ ಮಾಡಲಾಗಿದ್ದು, ಅಮೆರಿಕದಲ್ಲಿ ಜನಿಸಿದ ಕನ್ನಡಿಗ ರಿಕಿ ಕೇಜ್ಗೆ ಮೂರನೇ ಬಾರಿಗೆ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ರಿಕಿ ಅವರ 'ಡಿವೈನ್ ಟೈಡ್ಸ್' ಆಲ್ಬಮ್‌ಗೆ ಗ್ರ್ಯಾಮಿ ಪ್ರಶಸ್ತಿ ದೊರೆತಿದೆ. ಬ್ರಿಟಿಷ್ ರಾಕ್ ಬ್ಯಾಂಡ್ ದಿ ಪೊಲೀಸ್‌ನ ಡ್ರಮ್ಮರ್ ಸ್ಟೀವರ್ಟ್ ಕೋಪ್ಲ್ಯಾಂಡ್ ಜೊತೆಗೆ ಪ್ರಶಸ್ತಿ ಹಂಚಿಕೊಂಡಿದ್ದಾರೆ. ತಮಗೆ ದೊರೆತ ಪ್ರಶಸ್ತಿ ಹಾಗೂ ಗೌರವವನ್ನು ದೇಶಕ್ಕೆ ಅರ್ಪಿಸಿರುವ ರಿಕಿ ಪ್ರತಿಷ್ಠಿತ ಪ್ರಶಸ್ತಿಯನ್ನು ಮತ್ತೊಮ್ಮೆ ಪಡೆದುಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಲಾಸ್ ಏಂಜಲೀಸ್‌ನಲ್ಲಿ ಇಂದು ನಡೆದ ಸಮಾರಂಭದಲ್ಲಿ ವಿಶ್ವದ ದಿಗ್ಗಜ ಸಂಗೀತ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೂರನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದ ರಿಕಿ ಕೇಜ್ ಅವರು, ರಾಕ್ ಲೆಜೆಂಡ್ ಸ್ಟೀವರ್ಟ್ ಕೋಪ್ಲ್ಯಾಂಡ್ ಅವರೊಂದಿಗೆ ಕಾಣಿಸಿಕೊಂಡರು. ರಿಕಿ ಕೇಜ್ ಅವರ 'ಡಿವೈನ್ ಟೈಡ್ಸ್' ಆಲ್ಬಮ್ ಅತ್ಯುತ್ತಮ ಆಡಿಯೊ ಆಲ್ಬಮ್ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆಯಿತು. ಕಳೆದ ವರ್ಷವೂ ಇದೇ ಆಲ್ಬಂ ಅತ್ಯುತ್ತಮ ಹೊಸ ಕಾಲದ ಆಲ್ಬಂ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ರಿಕ್ಕಿ ಕೇಜ್, ನೆರೆದಿದ್ದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. "ನನ್ನ ಡಿವೈನ್ ಟೈಡ್ಸ್ ಆಲ್ಬಂಗಾಗಿ ಎರಡನೇ ಗ್ರ್ಯಾಮಿ ಪ್ರಶಸ್ತಿಯನ್ನು ಸ್ವೀಕರಿಸಲು ಖುಷಿಯಾಗುತ್ತಿದೆ. ಭಾರತೀಯ ಸಂಗೀತ ರಂಗಕ್ಕೆ ಈ ಪ್ರಶಸ್ತಿಯನ್ನು ಅರ್ಪಿಸುವೆ ಎಂದು ಹೇಳಿದರು. ಮಹಿಳಾ ವಿಭಾಗದಲ್ಲಿ ಗಾಯಕಿ ಬೆಯಾನ್ಸ್ ಗ್ರ್ಯಾಮಿ ಪ್ರಶಸ್ತಿ ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದರು. ಅತಿ ಹೆಚ್ಚು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದ ಮಹಿಳೆ ಎಂಬ ಇತಿಹಾಸ ಸೃಷ್ಟಿಸಿದರು. ಅವರು ಒಟ್ಟಾರೆ 32 ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದಕ್ಕೂ ಮೊದಲು ಹಂಗೇರಿಯನ್-ಬ್ರಿಟಿಷ್ ಸಂಗೀತಗಾರ್ತಿ ಜಾರ್ಜ್ ಸೋಲ್ಟಿ 31 ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿದ್ದರು.
ಪ್ರಶಸ್ತಿ ಪಡೆದ ಇತರರು: ಕ್ರಿಸ್ಟಿನಾ ಅಗುಲೆರಾ ಅವರ ಅಗುಲೆರಾ ಆಲ್ಬಂ, ದಿ ಚೈನ್ಸ್ಮೋಕರ್ಸ್ ಅವರ ಮೆಮೋರಿಸ್ ಡು ನಾಟ್ ಓಪನ್, ಜೇನ್ ಇರಾಬ್ಲೂಮ್ರ ಪಿಕ್ಚರಿಂಗ್ ದಿ ಇನ್ವಿಸಿಬಲ್- ಫೋಕಸ್ 1 ಮತ್ತು ನಿಡಾರೊಸ್ಡೊಮೆನ್ಸ್ ಜೆಂಟೆಕೋರ್ ಮತ್ತು ಟ್ರೊಂಡೆಹೈಮ್ಸೊಲಿಸ್ಟೆನ್ ಅವರ ತುವಾಹುನ್, ಬೀಟ್ಟುಡೀಸ್ ಫಾರ್ ಎ ಔಂಡೆಡ್ ವರ್ಲ್ಡ್ಗೆ ಪ್ರಶಸ್ತಿ ದೊರೆಯಿತು.
ಉಳಿದ ಪ್ರಶಸ್ತಿಗಳು: ಹ್ಯಾರಿ ಸ್ಟೈಲ್ಸ್ರ ಹ್ಯಾರಿಸ್ ಹೌಸ್ಗೆ ವರ್ಷದ ಆಲ್ಬಮ್ ಪ್ರಶಸ್ತಿ ಸಿಕ್ಕರೆ, ಲಿಝೋ ಅವರ ಅಬೌಟ್ ಡ್ಯಾಮ್ ಟೈಮ್ಗೆ ವರ್ಷದ ದಾಖಲೆ, ಬೋನಿ ರೈಟ್ರ ಜಸ್ಟ್ ಲೈಕ್ ದಟ್ಗೆ ವರ್ಷದ ಹಾಡು, ಸಮರಾ ಜಾಯ್ಗೆ ಅತ್ಯುತ್ತಮ ಹೊಸ ಕಲಾವಿದ, ಅಡೆಲೆ ಅವರ ಈಸಿ ಆನ್ ಮಿಗೆ ಅತ್ಯುತ್ತಮ ಪಾಪ್ ಏಕವ್ಯಕ್ತಿ ಪ್ರದರ್ಶನ, ಸ್ಯಾಮ್ ಸ್ಮಿತ್ ಮತ್ತು ಕಿಮ್ ಪೆಟ್ರಾಸ್ರ ಅನ್ಹೋಲಿಗೆ ಉತ್ತಮ ಪಾಪ್ ಡಿಯೋ ಪ್ರಶಸ್ತಿ ಸಿಕ್ಕಿದೆ. ಕೆಂಡ್ರಿಕ್ ಲಾಮರ್ರ ಮಿ. ರೇಲ್ & ದಿ ಬಿಗ್ ಸ್ಟೆಪ್ಪರ್ಸ್- ಅತ್ಯುತ್ತಮ ರಾಪ್ ಆಲ್ಬಮ್, ಬೆಯಾನ್ಸ್ರ ರಿನೈಸೆನ್ಸ್ಗೆ ಅತ್ಯುತ್ತಮ ನೃತ್ಯ/ಎಲೆಕ್ಟ್ರಾನಿಕ್ ಆಲ್ಬಮ್ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದೆ.
ಓದಿ: ಕನ್ನಡಿಗ ರಿಕಿ ಕೇಜ್ ಮುಡಿಗೆ ಮತ್ತೊಂದು ಗ್ರ್ಯಾಮಿ ಗರಿ.. ಪ್ರಶಸ್ತಿಯನ್ನು ದೇಶಕ್ಕೆ ಅರ್ಪಿಸಿದ ಸಂಗೀತ ಸಂಯೋಜಕ