ನವದೆಹಲಿ : ಬಾಲಿವುಡ್ ನಟಿ ಸೋನಂ ಕಪೂರ್ ಮತ್ತು ಉದ್ಯಮಿ ಆನಂದ್ ಅಹುಜಾ ಅವರ ಮನೆಯಲ್ಲಿ ಫೆಬ್ರವರಿ ತಿಂಗಳಲ್ಲಿ 2.4 ಕೋಟಿ ನಗದು ಮತ್ತು ಚಿನ್ನಾಭರಣ ಕಳುವಾದ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ನಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈ ಬಗ್ಗೆ ಇದೀಗ ಪ್ರಕಟಣೆ ಮೂಲಕ ಮಾಹಿತಿ ಬಹಿರಂಗ ಪಡಿಸಿದ್ದಾರೆ.
ಫೆಬ್ರವರಿ 11ರಂದು ನಟಿ ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಅವರ ದೆಹಲಿ ನಿವಾಸದಲ್ಲಿ ₹2.4 ಕೋಟಿ ನಗದು ಮತ್ತು ಆಭರಣಗಳನ್ನು ದರೋಡೆ ಮಾಡಲಾಗಿತ್ತು. ಘಟನೆ ನಡೆದ 2 ವಾರಗಳ ನಂತರ ಇದು ನಟಿಯ ಮನೆಯವರ ಗಮನಕ್ಕೆ ಬಂದು ಬಳಿಕ ಫೆಬ್ರವರಿ 23ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಕರಣ ಕುರಿತಂತೆ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. ತಂಡಗಳನ್ನು ರಚಿಸಲಾಗಿದ್ದು, ಸಾಕ್ಷ್ಯಗಳ ಪರಿಶೀಲನೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಸೋನಂ ಕಪೂರ್ ಅವರ ಮಾವ ಹರೀಶ್ ಅಹುಜಾ ಅವರ ನಕಲಿ ಡಿಜಿಟಲ್ ಸಹಿ ಬಳಸಿಕೊಂಡು 27 ಕೋಟಿ ರೂ. ವಂಚಿಸಿರುವ ಘಟನೆ ನಡೆದಿದೆ. ಈ ಬಗ್ಗೆ ಅವರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಹರೀಶ್ ಅಹುಜಾ ಅವರ ಫರಿದಾಬಾದ್ ಮೂಲದ ಶಾಹಿ ಎಕ್ಸ್‌ಪೋರ್ಟ್ ಫ್ಯಾಕ್ಟರಿ ಸಂಸ್ಥೆಗೆ ಸೇರಿದ ರಾಜ್ಯ ಮತ್ತು ಕೇಂದ್ರ ತೆರಿಗೆಗಳ ರಿಯಾಯಿತಿ ಮತ್ತು ಪರವಾನಿಗೆಗಳನ್ನು ದುರುಪಯೋಗಪಡಿಸಿಕೊಂಡಿದ್ದಲ್ಲದೇ, ಅವರ ನಕಲಿ ಡಿಜಿಟಲ್ ಸಹಿಯ ಆಧಾರದ ಮೇಲೆ ಕೋಟ್ಯಂತರ ರೂಪಾಯಿ ಹಣವನ್ನು ದುಷ್ಕರ್ಮಿಗಳು ವಂಚಿಸಿದ್ದಾರೆ. ಈ ಬಗ್ಗೆ ಕಳೆದ ವರ್ಷ ಜುಲೈನಲ್ಲಿ ದಾಖಲಾಗಿದ್ದ ದೂರಿನ ಆಧಾರದ ಮೇಲೆ ದೆಹಲಿ, ಮುಂಬೈ, ಚೆನ್ನೈ, ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ 9 ಮಂದಿಯನ್ನು ಬಂಧಿಸಲಾಗಿತ್ತು.