ಹೈದರಾಬಾದ್: ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪರಿಸರದ ಸಮೃದ್ಧಿ ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಕಾರಣವಾಗಿದೆ. ಇದನ್ನರಿತ ಅಲ್ಲು ಅರ್ಜುನ್ ಸಹ ತಮ್ಮ ಚಿತ್ರ ಪುಷ್ಪ ಚಿತ್ರೀಕರಣದ ವೇಳೆ ಪರಿಸರ ಕಾಳಜಿಯನ್ನು ಹೊತ್ತಿದ್ದರು.
ಪ್ಯಾನ್-ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ತಮ್ಮ 'ಪುಷ್ಪ - ದಿ ರೈಸ್' ಚಿತ್ರದಲ್ಲಿ ತಮ್ಮ ಅದ್ಭುತ ನಟನೆಯಿಂದ ಜನಮನ ಗೆದ್ದಿರುವುದು ಗೊತ್ತಿರುವ ಸಂಗತಿ. ಅಲ್ಲು ಅರ್ಜುನ್ ತಮ್ಮ ನಟನೆ ಹೊರತು ಪಡಿಸಿದರೆ, ಅವರೊಬ್ಬರು ಪರಿಸರವಾದಿಯೂ ಆಗಿದ್ದಾರೆ. ಪಕೃತಿ ಮತ್ತು ಅದರ ರಕ್ಷಣೆ ಮಾಡುವ ಕಾರ್ಯವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
ನಟನ ಪ್ರಕೃತಿಯ ಮೇಲಿನ ಪ್ರೀತಿ ಅವರ ಅಭಿಮಾನಿಗಳಿಗೆ ಚೆನ್ನಾಗಿ ತಿಳಿದಿದೆ. 'ಪುಷ್ಪಾ' ಚಿತ್ರದ ಚಿತ್ರೀಕರಣದ ಸಮಯದಲ್ಲಿಯೂ ಕಾಡಿನ ನೈರ್ಮಲ್ಯದ ಬಗ್ಗೆ ನಟ ಅಲ್ಲು ಅರ್ಜುನ್ ವಿಶೇಷ ಕಾಳಜಿ ವಹಿಸಿದ್ದರು. ಆಂಧ್ರಪ್ರದೇಶದ ಸುಂದರವಾದ ಮರೆಡುಮಿಲ್ಲಿ ಕಾಡಿನಲ್ಲಿ 'ಪುಷ್ಪ' ಚಿತ್ರವನ್ನು ವ್ಯಾಪಕವಾಗಿ ಚಿತ್ರೀಕರಿಸಲಾಗಿದೆ. ಈ ವೇಳೆ, ನಟ ಅಲ್ಲು ಅರ್ಜುನ್ ಕಾಡಿನ ಸೌಂದರ್ಯ ಕಾಪಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
ಓದಿ: 'ಕೆಜಿಎಫ್ 2' ಸಿನಿಮಾ ನೋಡಿ ನಟ ಅಲ್ಲು ಅರ್ಜುನ್ ಹೇಳಿದ್ದೇನು?!
ಹೌದು, ಚಿತ್ರದ ಚಿತ್ರೀಕರಣದ ಸಮಯದಲ್ಲಿ ಕಾಡಿನ ಸೌಂದರ್ಯಕ್ಕೆ ಧಕ್ಕೆಯಾಗದಂತೆ ನಟ ಬನ್ನಿ ನೋಡಿಕೊಂಡಿದ್ದಾರೆ. ಪ್ಲಾಸ್ಟಿಕ್ ಚೀಲಗಳು, ನೀರಿನ ಬಾಟಲಿಗಳು ಸೇರಿದಂತೆ ಮುಂತಾದ ತ್ಯಾಜ್ಯ ವಸ್ತುಗಳನ್ನು ಕಸದ ಡಬ್ಬಿಗಳಲ್ಲಿ ಎಸೆಯಲು ವಿನಂತಿಸಿದ್ದರು. ಪ್ರಕೃತಿಯ ಸೌಂದರ್ಯಕ್ಕೆ ಹಾನಿಯಾಗದಂತೆ ಅರಣ್ಯ ಸ್ವಚ್ಛವಾಗಿಡಲು ಕಸದ ತೊಟ್ಟಿಗಳನ್ನು ನಿರ್ಮಿಸಿದ್ದರು. ಅದರಂತೆ ಅವರು ತಮ್ಮ ಚಿತ್ರದ ಚಿತ್ರೀಕರಣ ಮುಗಿಯುವವರಿಗೆ ಕಾಡಿನ ಸೌಂದರ್ಯವನ್ನು ಕಾಪಾಡಿದ್ದಾರೆ ಎಂದು ತಿಳಿದು ಬಂದಿದೆ.
ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ: ದಿ ರೈಸ್' ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಈ ಚಿತ್ರ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದ್ದು, ಹಿಂದಿ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ಕ್ಲಬ್ಗೆ ಪ್ರವೇಶಿಸಿತು. ಈ ಚಿತ್ರ ವಿಶ್ವದಾದ್ಯಂತ ಒಟ್ಟು 300 ಕೋಟಿ ಗಳಿಸಿದೆ. ನಟ ಅಲ್ಲು ಅರ್ಜುನ್ ಪ್ರಸ್ತುತ 'ಪುಷ್ಪಾ - ದಿ ರೂಲ್' ಎಂಬ ಸೀಕ್ವೆಲ್‌ನಲ್ಲಿ ಬ್ಯುಸಿಯಾಗಿದ್ದಾರೆ.