ನವದೆಹಲಿ: ಪ್ರಸಕ್ತ ವರ್ಷದ ಲೋಕಸಭಾ ಚುನಾವಣೆಯಿಂದ ಹೊರಗುಳಿಯುವುದಾಗಿ ಸ್ಪೀಕರ್ ಹಾಗೂ ಬಿಜೆಪಿ ಸಂಸದೆ ಸುಮಿತ್ರಾ ಮಹಾಜನ್ ಖಚಿತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರು ಪ್ರಕಟಣೆ ಹೊರಡಿಸಿದ್ದಾರೆ.
ಇಂದೋರ್ ಸಂಸದೀಯ ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲು ಬಿಜೆಪಿ ಹಿಂದೇಟು ಹಾಕುತ್ತಿದ್ದು, ಇದರ ಮಧ್ಯೆ ಸ್ಪೀಕರ್ ಈ ನಿರ್ಧಾರ ಕೈಗೊಂಡಿದ್ದಾರೆ.
ತಾವೂ ರಿಲೀಸ್ ಮಾಡಿರುವ ಪತ್ರದಲ್ಲಿ ಭಾರತೀಯ ಜನತಾ ಪಾರ್ಟಿ ಇಲ್ಲಿಯವರೆಗೂ ಇಂದೋರ್ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಪಕ್ಷ ಬೇರೆಯವರ ಹೆಸರು ಘೋಷಣೆ ಮಾಡಲು ಮುಜುಗರಕ್ಕೊಳಗಾಗಿರಬಹುದು. ಹೀಗಾಗಿ ನಾನು ಇನ್ಮುಂದೆ ಲೋಕಸಭೆ ಚುನಾವಣಾಯಲ್ಲಿ ಸ್ಪರ್ಧೆ ಮಾಡಲ್ಲ. ಪಕ್ಷ ತನ್ನ ನಿರ್ಣಯವನ್ನ ಮುಕ್ತವಾಗಿ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ. ಇದೇ ವೇಳೆ ಇಂದೋರ್ ಜನತೆ ನನಗೆ ಇಲ್ಲಿಯವರೆಗೂ ಪ್ರೀತಿ,ವಿಶ್ವಾಸ ತೋರಿಸಿದ್ದಾರೆ. ಅದಕ್ಕೆ ನಾನು ಅಬಾರಿಯಾಗಿರುವೆ ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ.
75 ವ ರ್ಷದ ಸುಮಿತ್ರಾ ಇಂದೋರ್ ಕ್ಷೇತ್ರದಿಂದ 8 ಸಲ ಸಂಸದೆಯಾಗಿ ಆಯ್ಕೆಯಾಗಿದ್ದರು. ಬಿಜೆಪಿ ವಯಸ್ಸಾದ ಬಿಜೆಪಿ ಮುಖಂಡರಿಗೆ ಟಿಕೆಟ್ ನೀಡದಿರಲು ನಿರ್ಧರಿಸಿರುವ ಕಾರಣ, ಸುಮಿತ್ರಾ ಅವರಿಗೂ ಅದು ಅನ್ವಯವಾಗುತ್ತಿದೆ. ಈಗಾಗಲೇ ಎಲ್.ಕೆ. ಅಡ್ವಾಣಿ, ಮುರುಳಿ ಮನೋಹರ್ ಜೋಶಿ ಟಿಕೆಟ್ನಿಂದ ವಂಚಿತರಾಗಿದ್ದಾರೆ. ಸುಮಿತ್ರಾ ಮಹಾಜನ್ 1989ರಿಂದಲೂ ಈ ಕ್ಷೇತ್ರದಿಂದ ಗೆಲುವು ಸಾಧಿಸುತ್ತಾ ಬರುತ್ತಿದ್ದು, ಇದೇ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಚಂದ್ರ ಸೇಥಿ ವಿರುದ್ಧ ಗೆಲುವು ಕೂಡ ಸಾಧಿಸಿದ್ದಾರೆ.