ಮೈಸೂರು : 23 ರ ನಂತರ ಸಮ್ಮಿಶ್ರ ಸರ್ಕಾರ ಬೀಳುತ್ತದೆ ಎಂದು ಬಿಜೆಪಿಯವರು ಹೊಸ ಕೋಟ್ಗಳನ್ನ ಹೊಲಿಸಿಕೊಳ್ಳುತ್ತಿದ್ದಾರೆ. ಮಾಧ್ಯಮಗಳು ಸಿರಿಯಲ್ ಎಪಿಸೋಡ್ ರೀತಿ ಸರ್ಕಾರ ಬಿದ್ದು ಹೋಗುತ್ತೆ ಅಂತ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದಾರೆ. ಆದ್ರೆ ಯಾವುದೇ ಕಾರಣಕ್ಕೂ ಸರ್ಕಾರ ಬೀಳುವುದಿಲ್ಲ, ಸಿದ್ದರಾಮಯ್ಯ ಅವರ ಮಾರ್ಗದರ್ಶನಲ್ಲೇ ಸರ್ಕಾರ ಮುಂದುವರೆಯುತ್ತದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ನಗರದ ಕಲಾಮಂದಿರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿ ಭಾಷಣ ಮಾಡಿ ಮಾತನಾಡಿ, ಕಳೆದ 3 ತಿಂಗಳಿಂದ ಕೆಲವು ಎಲೆಕ್ಟ್ರಾನಿಕ್ ಮಾಧ್ಯಮಗಳು ಬಿತ್ತರಿಸುತ್ತಿರುವ ಸುದ್ದಿಯ ಬಗ್ಗೆ ಅಸಮಾಧಾನ ಹೊರ ಹಾಕಿ ವಾಗ್ದಾಳಿ ನಡೆಸಿದ ಸಿಎಂ, ಕೆಲವು ಎಲೆಕ್ಟ್ರಾನಿಕ್ ಮಾಧ್ಯಮಗಳು ಸಮ್ಮಿಶ್ರ ಸರ್ಕಾರ ಆಗ ಬಿದ್ದು ಹೋಗುತ್ತದೆ, ಈಗ ಬಿದ್ದು ಹೋಗುತ್ತದೆ ಎಂದು ಧಾರವಾಹಿ ಎಪಿಸೋಡ್ ಗಳ ರೀತಿಯಲ್ಲಿ ಪ್ರಸಾರ ಮಾಡುತ್ತಿವೆ.
ಇದರ ಜೊತೆಗೆ ಲೋಕಾಸಭಾ ಚುನಾವಣೆಯ ಫಲಿತಾಂಶದ ನಂತರ ಸರ್ಕಾರ ಬಿದ್ದು ಹೋಗುತ್ತದೆ ಎಂದು ನಂಬಿರುವ ರಾಜ್ಯ ಬಿಜೆಪಿ ನಾಯಕರು ಈಗಾಗಲೇ ಪ್ರಮಾಣ ವಚನ ಸ್ವೀಕಾರ ಮಾಡಲು ಹೊಸ ಕೋಟು, ಪ್ಯಾಂಟ್ಗಳನ್ನು ಹೊಲಿಸಿಕೊಳ್ಳುತ್ತಿದಾರೆ. ಸಿದ್ದರಾಮಯ್ಯ ಅವರ ಆಶೀರ್ವಾದದಿಂದ ಈ ಸರ್ಕಾರ ಬೀಳುವುದಿಲ್ಲ. 5 ವರ್ಷ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತದೆ ಎಂದರು.
ಮಾಧ್ಯಮಗಳ ಸಹವಾಸವೇ ಡೆಂಜರ್
ಇತ್ತೀಚೆಗೆ ಕೆಲವು ದೃಶ್ಯ ಮಾಧ್ಯಮಗಳು ನೀಡುತ್ತಿರುವ ವರದಿಗಳಿಂದ ನಾವು ನಿದ್ದೆಯನ್ನೇ ಮಾಡುವಂಗಿಲ್ಲ ಅದಕ್ಕೆ ಅವರ ಸಹವಾಸವೇ ಬೇಡ ಎಂದು ದೂರ ಉಳಿದಿದ್ದೇನೆ. ಮಾಧ್ಯಮಗಳ ನಡವಳಿಕೆಯಿಂದ ಅವರ ಮೇಲೆ ಇದ್ದ ಗೌರವ ಕಡಿಮೆಯಾಗಿದೆ. ಮಾಧ್ಯಮಗಳಲ್ಲಿ ಯಾವುದನ್ನು ತೋರಿಸಬೇಕು ಯಾವುದನ್ನು ತೋರಿಸಬಾರದು ಎಂಬ ಕನಿಷ್ಠ ಅರಿವೇ ಇಲ್ಲ. ಟಿ.ಆರ್.ಪಿಗಾಗಿ ರಾಜಕಾರಣಿಗಳನ್ನು ಕಾಮಿಡಿ ಪೀಸ್ ಗಳಾಗಿ ತೋರಿಸುತ್ತಿದ್ದಾರೆ ನಾವೇನು ಬಿಟ್ಟಿ ಸಿಕ್ಕಿದ್ದೀವೆ ಎಂದು ಕಿಡಿಕಾರಿದದರು
ಕೆಲವು ದೃಶ್ಯ ಮಾಧ್ಯಮಗಳ ಕಾರ್ಯಕ್ರಮದಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದ್ದು, ಅದಕ್ಕೆ ಮಾಧ್ಯಮಗಳ ನಿಯಂತ್ರಣಕ್ಕೆ ಹೊಸ ಕಾನೂನು ರಚಿಸುವ ಚಿಂತನೆ ನಡೆಸಿದ್ದೇನೆ ಎಂದರು. ನಾವು ಮಾಧ್ಯಮಗಳಿಂದ ಬದುಕಬೇಕಾಗಿಲ್ಲ, ನಾವು ಬದುಕಿರೋದು ರಾಜ್ಯದ ಜನರಿಂದ. ಮಾಧ್ಯಮಗಳನ್ನು ನಡೆಸಲು ಸಾಧ್ಯವಾಗದಿದ್ದರೆ ಬಾಗಿಲು ಮುಚ್ಚಿಕೊಂಡು ಹೋಗಿ ಅದಕ್ಕೆ ಬದಲಾಗಿ ಸಮಾಜವನ್ನು ಹಾಳು ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.