ಕಾರವಾರ: ಮತಗಟ್ಟೆಯಲ್ಲಿ ಮತದಾನದ ಗೌಪ್ಯತೆ ವ್ಯವಸ್ಥೆ ಕಾಯ್ದುಕೊಂಡಿಲ್ಲದೆ ಇದ್ದರೆ ತಕ್ಷಣ ವರದಿ ಮಾಡುವಂತೆ ಸೂಕ್ಷ್ಮ ಚುನಾವಣಾ ವೀಕ್ಷಕರಿಗೆ ಚುನಾವಣಾ ವೀಕ್ಷಕ ನವೀನ್ ಎಸ್.ಎಲ್ ಸೂಚಿಸಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಸೂಕ್ಷ್ಮ ಚುನಾವಣಾ ವೀಕ್ಷಕರಾಗಿ (ಮೈಕ್ರೋ ಅಬ್ಸರ್‍ವರ್) ನೇಮಿಸಿಕೊಂಡಿರುವ ಬ್ಯಾಂಕ್, ಅಂಚೆ ಕಚೇರಿ ಹಾಗೂ ಕೇಂದ್ರ ಸರ್ಕಾರ ಅಧೀನ ಸಂಸ್ಥೆಗಳ ಸುಮಾರು 200 ಸಿಬ್ಬಂದಿಗೆ ಶುಕ್ರವಾರ ತರಬೇತಿ ನೀಡಿ ಮಾತನಾಡಿದರು. ಮತಗಟ್ಟೆಯಲ್ಲಿ ಮತದಾನದ ಗೌಪ್ಯತೆ ಸೇರಿದಂತೆ ವಿವಿಧ ಕ್ರಮಗಳನ್ನು ನಿಯಮಾನುಸಾರ ಕೈಗೊಳ್ಳಬೇಕಿದೆ. ಇವುಗಳಲ್ಲಿ ಲೋಪಗಳು ಕಂಡು ಬಂದರೆ ತಕ್ಷಣ ತಮಗೆ ವರದಿ ಮಾಡುವಂತೆ ಅವರು ಸೂಚಿಸಿದರು.
ಮೈಕ್ರೋ ವೀಕ್ಷಕರು ಮತಗಟ್ಟೆ ಅಧಿಕಾರಿಗಳಲ್ಲ ನೇರವಾಗಿ ಚುನಾವಣಾ ವೀಕ್ಷಕರಿಂದ ನೇಮಕಗೋಂಡಿದ್ದೀರಿ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ತಮ್ಮ ಕರ್ತವ್ಯವೆಂದರೆ ಮತದಾನ ಸರಿಯಾಗಿ ಆಗುತ್ತಿದೆಯೇ, ಮಾಕ್‍ಪೋಲ್ ಮಾಡಿರುವ ಬಗ್ಗೆ ಅಥವಾ ವೆಬ್‍ಕ್ಯಾಸ್ಟಿಂಗ್ ಮಾಡಿದ್ದಲ್ಲಿ ಅದು ಸರಿಯಾಗಿ ಆಗಿದೆಯೇ, ಯಾವುದಾದರೂ ಲೋಪ ನಡೆಯುತ್ತಿದೆಯೇ, ಮತಗಟ್ಟೆ ಅಧಿಕಾರಿಗಳು ಯಾವುದಾದರೂ ರಾಜಕೀಯ ಪಕ್ಷಗಳ ಪ್ರಭಾವಕ್ಕೆ ಒಳಗಾಗಿದ್ದಾರೆಯೇ ಎಂಬಿತ್ಯಾದಿ ವಿಷಯಗಳ ಮೇಲೆ ನಿಗಾ ವಹಿಸಿ ತಮಗೆ ತಕ್ಷಣ ವರದಿ ಮಾಡಬೇಕು ಎಂಬುದಾಗಿ ಚುನಾವಣಾ ವೀಕ್ಷಕ ನವೀನ್ ಎಸ್.ಎಲ್. ಅವರು ತರಬೇತಿ ನೀಡಿದರು.
ಏಪ್ರಿಲ್ 23ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ನಡೆಯುತ್ತಿದ್ದು ಏಪ್ರಿಲ್ 22 ರಂದು ಮೈಕ್ರೋ ವೀಕ್ಷಕರಿಗೆ ಮತಗಟ್ಟೆಗಳಿಗೆ ನಿಯೋಜನೆ ಮಾಡಲಾಗುವುದು. ಅಂದು ನಿಯೋಜನೆಗೊಂಡ ಮತಗಟ್ಟೆಗೆ ತೆರಳಿ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿಬೇಕು ಎಂದರು.
ಮೈಕ್ರೋ ವೀಕ್ಷಕರಾಗಿ ನೇಮಕಗೊಂಡವರಿಗೆ ತಾವು ಎಲ್ಲಿ ನಿಯೋಜನೆಗೊಂಡಿರುತ್ತೀರೋ ಆ ಮತಗಟ್ಟೆಯಿಂದಲೇ ತಮ್ಮ ಮತ ಚಲಾಯಿಸಲು ಚುನಾವಣಾ ಕರ್ತವ್ಯ ಪ್ರಮಾಣಪತ್ರ (ಇಡಿಸಿ)ವನ್ನು ನೀಡಲಾಗುವುದು. ಅಲ್ಲದೆ ಬೇರೆ ಮತ ಕ್ಷೇತ್ರದ ಸಿಬ್ಬಂದಿ ಇದ್ದರೆ ಅವರಿಗೂ ಅಂಚೆ ಮತದಾನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.