ಕಾರವಾರ: ಮತದಾನ ಮಾಡಿ ಅಂತಾ ಚುನಾವಣಾ ಆಯೋಗ ಎಷ್ಟೇ ಪ್ರಚಾರ, ಜಾಗೃತಿ ಮೂಡಿಸಿದರು ಪೂರ್ಣ ಪ್ರಮಾಣದ ಮತದಾನ ಆಗುತ್ತಿಲ್ಲ. ಇಂದಿಗೂ ತಮ್ಮ ಹಕ್ಕು ಚಲಾಯಿಸಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಆದರೆ ಇಲ್ಲೋರ್ವ ಶತಾಯುಷಿ ಮಾತ್ರ ಎದ್ದು ಯುವಜನರು ನಾಚುವಂತೆ 102ರ ಇಳಿ ವಯಸ್ಸಿನಲ್ಲೂ ತಪ್ಪದೆ ಮತ ಚಲಾಯಿಸುತ್ತಾರೆ.
ಹೌದು, ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಸ್ನೋಟಿ ಗ್ರಾಮದ ಗಣಪತಿ ಸಾಳುಂಕೆ ಅವರಿಗೆ ಇದೀಗ ಬರೋಬ್ಬರಿ 102 ವರ್ಷ ವಯಸ್ಸು. ಶತಾಯುಷಿಯಾದರೂ ವಯಸ್ಸು ದೇಹಕ್ಕಾಗಿದೆಯೇ ಹೊರತು, ತಮ್ಮ ಮನಸ್ಸಿಗೆ ಅಲ್ಲ ಎನ್ನುವ ಮೂಲಕ ಉತ್ಸಾಹದಿಂದಲೇ ಮಕ್ಕಳು-ಮೊಮ್ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ.
18 ಜುಲೈ 1918 ರಲ್ಲಿ ಜನಿಸಿದ್ದ ಗಣಪತಿ ಶಂಭು ಸಾಳುಂಕೆ ಪೊಲೀಸ್ ಇನ್ಸ್ಪೆಕ್ಟರ್ ಆಗಿ ರಾಜ್ಯದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದವರು. ನಿವೃತ್ತಿ ಬಳಿಕ ಕಾರವಾರದ ಅಸ್ನೋಟಿ ಬಳಿ ಮಕ್ಕಳ ಜೊತೆ ನೆಲೆಸಿದ್ದಾರೆ. ನಾನು ಆರಂಭದಲ್ಲಿ ಮಾಡಿದ್ದ ಮತದಾನ ಸರಿಯಾಗಿ ನೆನಪಿಲ್ಲ. ಆದರೆ ಮತದಾನದ ಚೀಟಿ ಸಿಕ್ಕ ಬಳಿಕ ತಪ್ಪದೇ ಮತದಾನ ಮಾಡಿದ್ದೇನೆ. ಕಳೆದ ವರ್ಷ ವಿಧಾನಸಭಾ ಚುನಾವಣೆ ವೇಳೆಯೂ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದೆ. ಈ ಚುನಾವಣೆಗೂ ತಪ್ಪದೇ ಮತದಾನ ಮಾಡುತ್ತೇನೆ. ಆದರೆ ನನ್ನನ್ನು ಆಟೋದಲ್ಲಿ ಕರೆದೊಯ್ಯಬೇಕು ಎನ್ನುತ್ತಾರೆ ಈ ತಾತ.
ಸ್ನೇಹಿತನಿಗೂ ಸ್ಪೂರ್ತಿ:
ಇನ್ನು ಗಣಪತಿ ಅವರ ಸ್ನೇಹಿತರಾದ 89 ವರ್ಷದ ಶಾಂಬಾ ಸಾವಂತ್ ಅವರು ಮಾತನಾಡಿದ್ದು, 102 ವರ್ಷದ ಗಣಪತಿ ಸಾಳುಂಕೆಯನ್ನು ನಾವು ಹತ್ತಿರದಿಂದ ನೋಡಿದವರು. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅವರು ಪ್ರಾಮಾಣಿಕರು. ಅಲ್ಲದೆ ನಮಗೆ ಗೊತ್ತಿರುವಂತೆ ಪ್ರತಿ ಬಾರಿಯೂ ತಪ್ಪದೇ ಮತದಾನ ಮಾಡುತ್ತಿದ್ದಾರೆ ಎಂದು ಹೇಳಿದರು.
ಇನ್ನು ತೆರಿಗೆ ಇಲಾಖೆ ನೌಕರನಾಗಿದ್ದ ಶಾಂಬಾ ಸಾವಂತ್, ತಾವು ಚುನಾವಣಾಧಿಕಾಯಾಗಿದ್ದ ಸಂದರ್ಭದಲ್ಲಿನ ನೆನಪನ್ನು ಮೆಲಕು ಹಾಕಿದ್ದಾರೆ. ಈ ಹಿಂದೆ ಚುನಾವಣೆ ಎಂದರೆ ಹಬ್ಬದ ವಾತಾವರಣ ಇರುತಿತ್ತು. ಚುನಾವಣಾ ದಿನ ಒಂದೇ ಬಸ್ನಲ್ಲಿ ಹಲವು ಮತಗಟ್ಟೆಗಳ ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದೆವು. ಸಂಜೆ ಮತದಾನ ಮುಗಿದ ಬಳಿಕ ಮತ್ತೆ ಅದೇ ಬಸ್ಗಾಗಿ ಕಾದು ಮತಪೆಟ್ಟಿಗೆಗಳನ್ನು ವಾಪಸ್ ತರುತ್ತಿದ್ದೆವು. ಆಗ ಜನರಿಗೆ ಶಿಕ್ಷಣ ಇರಲಿಲ್ಲ. ಇಂತವರಿಗೆ ಮತ ಹಾಕಬೇಕು ಎಂದಿದ್ದರೂ ಗುರುತು ಮಾಡಲು ಆಗುತ್ತಿರಲಿಲ್ಲ. ಆಗ ಚುನಾವಣಾಧಿಕಾರಿಗಳನ್ನು ಕೇಳಿ ಇಂತವರಿಗೆ ಹಾಕಬೇಕು ಎಂದು ಹೇಳುತ್ತಿದ್ದರು ಎಂದು ಹಳೇ ನೆನಪುಗಳನ್ನು ಮೆಲುಕು ಹಾಕಿದರು.
ನೋಟಾ ಒತ್ತುವವರು ಮನೆಯಲ್ಲಿಯೇ ಕಂಬಳಿ ಹೊದ್ದು ಮಲಗುವುದು ಒಳ್ಳೆಯದು:
ಇದೀಗ ಮತಗಟ್ಟೆಗಳಲ್ಲಿ ಸಕಲ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಜನರೂ ಕೂಡ ಎಲ್ಲವನ್ನು ತಿಳಿದುಕೊಂಡಿದ್ದಾರೆ. ನಾನು 24ನೇ ವಯಸ್ಸಿನಿಂದಲೂ ತಪ್ಪದೇ ಮಾತದಾನ ಮಾಡುತ್ತಿದ್ದೇನೆ. ಒಂದು ಬಾರಿಯೂ ಮತದಾನ ಮಾಡುವುದನ್ನು ಬಿಟ್ಟಿಲ್ಲ. ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಅದು ನಮ್ಮ ಹಕ್ಕು. ಆದರೆ ಈಗ ನೋಟಾ ಎಂಬುವ ಆಯ್ಕೆಯೊಂದನ್ನು ನೀಡಿದ್ದಾರೆ. ಆದರೆ ಅದಕ್ಕೆ ಒತ್ತುವವರು ಮತಗಟ್ಟೆಗೆ ಹೋಗುವ ಬದಲು ಮನೆಯಲ್ಲಿಯೇ ಕಂಬಳಿ ಹೊದ್ದು ಮಲಗುವುದು ಒಳ್ಳೆಯದು. ನಾವು ಇರುವುದರಲ್ಲಿಯೇ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಆದರೆ ನೋಟಾಗೆ ಒತ್ತಿದರೆ ಬೇರೆ ಯಾರಾದರು ಗೆಲ್ಲುವ ಸಾಧ್ಯತೆಗಳು ಇರುತ್ತವೆ ಎಂದು ಶಾಂಬಾ ಹೇಳಿದರು.