ದಾವಣಗೆರೆ: ರಾಜಕೀಯ ಬದ್ಧ ವೈರಿಗಳಾಗಿ ಚುನಾವಣಾ ಅಖಾಡದಲ್ಲಿ ಆರೋಪ ಪ್ರತ್ಯಾರೋಪ ಮಾಡುತ್ತ ಹಲ್ಲು ಮಸೆಯುತ್ತಿದ್ದ ಜೆಡಿಎಸ್ ಮಾಜಿ ಶಾಸಕ ಮತ್ತು ಕಾಂಗ್ರೆಸ್ ಹಾಲಿ ಶಾಸಕರು ಇಂದು ಒಂದಾಗಿ ಮೈತ್ರಿ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ಮಾಡಿದ್ರು.
ಬದ್ಧವೈರಿಗಳಾಗಿದ್ದ ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಮತ್ತು ಕಾಂಗ್ರೆಸ್ ಹಾಲಿ ಶಾಸಕ ರಾಮಪ್ಪ ಮೈತ್ರಿ ಧರ್ಮ ಪಾಲನೆಗಾಗಿ ಒಂದಾಗಿದ್ದು, ಜೊತೆಯಾಗಿಯೇ ತೆರೆದ ವಾಹನದಲ್ಲಿ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ಪರ ಹರಿಹರ ಪಟ್ಟಣದಲ್ಲಿ ಜಂಟಿಯಾಗಿ ಭರ್ಜರಿ ಪ್ರಚಾರ ನಡೆಸಿದರು.
ನಾವಿಬ್ಬರೂ ಬದ್ಧವೈರಿಗಳು, ಮುಖಕ್ಕೆ ಮುಖ ಕೊಟ್ಟು ಮಾತನಾಡುತ್ತಿರಲಿಲ್ಲ. ಜೊತೆಯಾಗಿದ್ದು ತುಂಬಾನೇ ಕಡಿಮೆ. ಆದ್ರೂ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದೆ. ಮೈತ್ರಿ ಧರ್ಮ ಪಾಲನೆಗಾಗಿ ನಾನು ಕಾಂಗ್ರೆಸ್ ಆಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಕೆಲಸ ಮಾಡಿಲ್ಲ ಎಂದು ಆರೋಪ ಮಾಡಬಾರದು. ಮೈತ್ರಿ ಅಭ್ಯರ್ಥಿ ಮಂಜಪ್ಪ 50 ಸಾವಿರ ಮತಗಳ ಅಂತರದಿಂದ ಜಯ ಗಳಿಸಲಿದ್ದಾರೆ ಎಂದು ಶಿವಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.
ರಾಮಪ್ಪ ಮಾತನಾಡಿ, ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಕಳೆದ 15 ವರ್ಷಗಳ ಕಾಲ ಸಂಸದರಾಗಿದ್ದರೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಕೇವಲ ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳಿಕೊಂಡು ಮತ ಕೇಳುತ್ತಿದ್ದಾರೆ. ಹರಿಹರ ತಾಲೂಕಿನ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಗಮನ ಹರಿಸಿಲ್ಲ. ಜೆಡಿಎಸ್ ಮಾಜಿ ಶಾಸಕ ಶಿವಶಂಕರ್ ಕೂಡ ಪ್ರಚಾರಕ್ಕೆ ಬರುತ್ತಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಕಾಂಗ್ರೆಸ್ ಗೆ ಬೆಂಬಲ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಮಂಜಪ್ಪ ಗೆಲ್ಲುವುದು ಖಚಿತ ಎಂದು ಹೇಳಿದರು.