ದಾವಣಗೆರೆ: ಅಭ್ಯರ್ಥಿ ನೋಡಿ ಜನ ವೋಟ್ ಹಾಕಬೇಕು. ಆದ್ರೆ ಬಿಜೆಪಿಯವರು ಮೋದಿ ನೋಡಿ ವೋಟ್ ಹಾಕಿ ಎಂದು ಕೇಳುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಚನ್ನಗಿರಿ ತಾಲ್ಲೂಕಿನ ತ್ಯಾವಣಗಿ ಗ್ರಾಮದಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪ್ರಧಾನಿ ಮೊನ್ನೆ ಚುನಾವಣಾ ಪ್ರಚಾರಕ್ಕೆ ಬಂದಾಗ ಬಾಗಲಕೋಟೆಯನ್ನು ಬಾಲಾಕೋಟ್‌ಗೆ ಹೋಲಿಕೆ ಮಾಡಿದ್ದಾರೆ. ನಮ್ಮ ಸೈನಿಕರು ಸರ್ಜಿಕಲ್ ಸ್ಟ್ರೈಕ್ ಮಾಡಿದರೆ, ಇವರು ನಾವೇ ಮಾಡಿದ್ದು ಎಂದು ಹೇಳಿ ಕೊಳ್ಳುತ್ತಾರೆ. ಇವರೇನು ಗನ್ ಹಿಡಿದು ಯುದ್ದ ಮಾಡಿದ್ರಾ ? ಕಾಂಗ್ರೆಸ್ ಸರ್ಕಾರ ಇದ್ದಾಗ 12 ಭಾರಿ ಸರ್ಜಿಕಲ್ ಸ್ಟ್ರೈಕ್ ಆಗಿವೆ. ಆ ವಿಚಾರವನ್ನು ಕಾಂಗ್ರೆಸ್ ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳಲಿಲ್ಲ. ಬಿಜೆಪಿಯವರು ನಾವೇ ಮಾಡಿದ್ದು ಎಂದು ಭಾವನಾತ್ಮಕವಾಗಿ ಮತ ಕೀಳಲು ಪ್ರಯತ್ನಿಸುತ್ತಾರೆ ವಿನ: ಅಭಿವೃದ್ದಿ ವಿಚಾರವಾಗಿ ಅಲ್ಲ ಎಂದು ಕಿಡಿಕಾರಿದರು.
ಕೆಲ ಯುವಕರು ಮೋದಿ ಮೋದಿ ಎಂದು ಕೂಗುತ್ತಾರೆ ಎಂದು ಅಣಕಿಸಿದ ಅವರು, ಯಡಿಯೂರಪ್ಪ ಕೆ.ಆರ್ ಪೇಟೆಯವರು, ಶಿಕಾರಿಪುರದವರಲ್ಲ. ಮಾವನ ಮನೆಗೆ ಬಂದು ನೆಲೆಸಿದ್ದಾರೆ ಎಂದು ಹೇಳಿದರು.
ಸಂಸದ ಜಿ.ಎಂ ಸಿದ್ದೇಶ್ವರ 15 ವರ್ಷದಲ್ಲಿ ಯಾವುದೇ ಕೆಲಸ ಮಾಡಿಲ್ಲ. ನಾನು ನಮ್ಮ ಸಾಧನೆ ಹಿಡಿದು ಚರ್ಚೆಗೆ ಬರುತ್ತೇನೆ, ಮೋದಿಯೂ ಬರಲಿ ಎಂದು ಹಿಂದೆ ಸವಾಲು ಹಾಕಿದ್ದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಸಾವಿರಾರು ಕೋಟಿ ರೂ ತಂದು ಅಭಿವೃದ್ದಿ ಕೆಲಸ ಮಾಡಿದ್ದರೂ ಸಹ ಯಾಕೆ ಕೈ ಬಿಟ್ಟಿರಿ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಈ ಸೋಲಿನಿಂದ ನೋವು ಪಟ್ಟುಕೊಂಡ ಮಲ್ಲಿಕಾರ್ಜುನ್ ಎಂಪಿ ಎಲೆಕ್ಷನ್‌ಗೆ ನಿಲ್ಲಲ್ಲ ಎಂದರು. ಹೀಗಾಗಿ ಅವರು ಮಂಜಪ್ಪರಿಗೆ ಟಿಕೆಟ್ ಕೊಡಿ ಎಂದಿದ್ದಕೆ ಕೊಟ್ಟಿದ್ದೇವೆ. ಒಳ್ಳೆಯ ಜನಪರ ಇರುವ ರಾಜಕಾರಣಿ ಮಂಜಪ್ಪ, ಬಿಜೆಪಿ ಅಭ್ಯರ್ಥಿ ಬಳಿ ಹಣ ಇದೆ ಎಂದು ಅವರಿಗೆ ವೋಟ್ ಹಾಕಬೇಡಿ, ಮಂಜಪ್ಪ ಕೈ ಹಿಡಿದು ಗೆಲ್ಲಿಸಿ ಎಂದು ಕರೆ ನೀಡಿದರು.