ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಕಂಡ ಅಭೂತ ಪೂರ್ವ ಗೆಲುವಿನಿಂದಾಗಿ ಕಂಗೆಟ್ಟಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮೈಸೂರಿನ ಸೋಲಿನ ಪರಾಮರ್ಶೆಗೆ ತೆರಳಲಿದ್ದಾರೆ.
ಇಂದು ದಿನವಿಡೀ ತಮ್ಮ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ಯಾರನ್ನು ಭೇಟಿ ಮಾಡಿರಲಿಲ್ಲ. ಸಂಜೆಯ ನಂತರ ಅರಮನೆ ಮೈದಾನದಲ್ಲಿ ಆತ್ಮೀಯರೊಬ್ಬರು ಹಮ್ಮಿಕೊಂಡಿದ್ದ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ವಾಪಸಾಗಿದ್ದನ್ನು ಬಿಟ್ಟರೆ ಬೇರೆಲ್ಲೂ ಅವರು ಕಾಣಿಸಿಕೊಳ್ಳಲಿಲ್ಲ.
ನಾಳೆ ಬೆಳಗ್ಗೆ ಪ್ರಯಾಣ
ಕಾವೇರಿ ನಿವಾಸದಿಂದ ನಾಳೆ ಬೆಳಗ್ಗೆ ಸಿದ್ದರಾಮಯ್ಯ ಪ್ರಯಾಣ ಬೆಳೆಸಲಿದ್ದಾರೆ. ಬೆಳಗ್ಗೆ 9.30ಕ್ಕೆ ವಿಶೇಷ ವಿಮಾನದ ಮೂಲಕ ತೆರಳಿ ಮೈಸೂರಲ್ಲಿ ಹಮ್ಮಿಕೊಂಡಿರುವ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿಎಂ ಕುಮಾರಸ್ವಾಮಿ ಜೊತೆ ಚರ್ಚಿಸಿ ಇದೀಗ ಮೈಸೂರಿಗೆ ತೆರಳುವ ನಿರ್ಧಾರ ಕೈಗೊಂಡಿರುವ ಸಿದ್ದರಾಮಯ್ಯ ನಾಳೆ ಮೈಸೂರಿನಲ್ಲಿಯೇ ತಂಗಲಿದ್ದು ನಾಡಿದ್ದು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಮೇ 29 ಕ್ಕೆ ರಾಜ್ಯ ಕಾಂಗ್ರೆಸ್ ಸಭೆ
ಮೇ 29 ಕ್ಕೆ ರಾಜ್ಯ ಕಾಂಗ್ರೆಸ್ ಸಭೆಯನ್ನು ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದು ಸಿದ್ದರಾಮಯ್ಯ ಅದರಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಳೆ ದಿನವಿಡಿ ಹಲವು ಕಾಂಗ್ರೆಸ್ ಮುಖಂಡರ ಜೊತೆ ಚರ್ಚಿಸಿ ಮೈಸೂರು-ಕೊಡಗು ಲೋಕಸಭೆ ಚುನಾವಣೆಯಲ್ಲಿ ಸೋಲಿಗೆ ಕಾರಣವನ್ನು ಹುಡುಕುವ ಯತ್ನ ಮಾಡಲಿದ್ದಾರೆ. ತಮ್ಮ ಆಪ್ತರಾಗಿರುವ ವಿಜಯ್ ಶಂಕರ್ ಸೋಲಿಗೆ ಕಾರಣ ಹುಡುಕುವ ಪ್ರಯತ್ನ ಮಾಡಲಿದ್ದಾರೆ. ಇದರ ಜೊತೆಗೆ ಚಾಮರಾಜನಗರದಲ್ಲಿ ಕೂಡ ತಮ್ಮ ಆಪ್ತರಾಗಿದ್ದ ಧ್ರುವನಾರಾಯಣ್ ಸೋಲಿಗೆ ಕಾರಣ ಹುಡುಕುವ ಯತ್ನ ಮಾಡಲಿದ್ದಾರೆ.
ತವರು ಜಿಲ್ಲೆಯ ಜಾಮರಾಜನಗರ ಹಾಗೂ ಶಾಸಕರಾಗಿರುವ ಬಾದಾಮಿ ಮತ್ತು ಆತ್ಮಿಯ ಕ್ಷೇತ್ರ ಬಾಗಲಕೋಟೆಯಲ್ಲಿ ಕಾಂಗ್ರೆಸ್ಗೆ ಭಾರಿ ಮುಖಭಂಗವಾಗಿದ್ದು, ಸಿದ್ದರಾಮಯ್ಯರನ್ನು ತೀವ್ರ ಆತಂಕಕ್ಕೆ ದೂಡಿದೆ. ಇದರಿಂದ ಶಾಸಕಾಂಗ ಪಕ್ಷದ ನಾಯಕರಾಗಿ ತಾವು ಸಮರ್ಥವಾಗಿ ಕಾರ್ಯ ನಿರ್ವಹಿಸಿಲ್ಲ ಎಂಬ ಆರೋಪವನ್ನು ಹೊರಬೇಕಾಗಿ ಬಂದಿದೆ. ಅದಕ್ಕಾಗಿ ಸೋಲಿನ ಪರಾಮರ್ಶೆಗೆ ಸಿದ್ದರಾಮಯ್ಯ ಮುಂದಾಗಿದ್ದು ನಾಳೆ ಮೈಸೂರಿನಲ್ಲಿ ಇದ್ದು ನಾಡಿದ್ದು ಬೆಂಗಳೂರಿಗೆ ವಾಪಸಾಗಲಿದ್ದಾರೆ.