ಚಿತ್ರದುರ್ಗ: ಕಳೆದ ಐದು ವರ್ಷದಲ್ಲಿ ನರೇಂದ್ರ ಮೋದಿ ದೇಶದ ಚೌಕಿದಾರ್ ಆಗಿ ಕೆಲಸ ಮಾಡಿದ್ರಾ..? ಚೌಕಿದಾರ್ ಚೋರ್ ಹೈ ಅಂತ ನಾನು ಹೇಳಲ್ಲ, ದೇಶದ ಜನರೇ ಹೇಳುತ್ತಿದ್ದಾರೆ ಎಂದು ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ವಾಕ್ಸಮರ ನಡೆಸಿದರು.
ಕೋಟೆನಾಡಿನಲ್ಲಿ ಮೋದಿ ಪ್ರಚಾರದ ಬಳಿಕ, ಆಗಮಿಸಿ ಮತಬೇಟೆ ನಡೆಸಿದ ಕಾಂಗ್ರೆಸ್ ಅಧ್ಯಕ್ಷ, ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿ.ಎನ್ ಚಂದ್ರಪ್ಪ ಪರ ಮತಯಾಚಿಸಿದರು. ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು, ಬಳಿಕ ಹಿಂದಿಯಲ್ಲಿ ಮೋದಿ ವಿರುದ್ಧ ಟೀಕಾಸಮರ ಮುಂದುವರೆಸಿದರು. ದೇಶದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗಳಿಗೂ 15 ಲಕ್ಷ ರೂ ಹಾಕುವುದಾಗಿ ಮೋದಿ ಹೇಳಿದ್ದರು. ಇಲ್ಲಿರುವ ಯಾರ ಅಕೌಂಟ್‌ಗಾದ್ರೂ ಹಣ ಬಂದಿದೆಯೇ..? ಎಂದು ಮತದಾರರನ್ನು ಪ್ರಶ್ನಿಸಿದರು.
ರಾಹುಲ್ ಭಾಷಣದ ಮುಖ್ಯಾಂಶಗಳು:
- ಮೋದಿ, ರೈತರು, ಕಾರ್ಮಿಕರ ಮನೆ ಮುಂದೆ ಇರುವುದಿಲ್ಲ. ಅವರು ಅಂಬಾನಿ, ಅದಾನಿ ಮನೆ ಮುಂದೆ ಇರ್ತಾರೆ.
- ಪ್ರಣಾಳಿಕೆಯ ಘೋಷಣೆಯಂತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ತಿಂಗಳಿಗೆ 6 ಸಾವಿರ ರೂ.ಯಂತೆ, ವರ್ಷಕ್ಕೆ 72 ಸಾವಿರ ರೂ ನಿಮ್ಮ ಖಾತೆಗೆ ನೇರವಾಗಿ ಹಾಕ್ತೀವಿ. ಈ ಹಣವನ್ನು ಮಹಿಳೆಯರ ಖಾತೆಗೆ ಹಾಕಲಾಗುತ್ತದೆ.
- ನಾನು ಚೌಕಿದಾರ್ ಅಲ್ಲ, ಇಲ್ಲಿ ಸುಳ್ಳು ಹೇಳಲು ಬಂದಿಲ್ಲ. ನನ್ನ ಬಾಯಿಂದ ಬರುವ ಮಾತುಗಳು ನಿಜ. ನಿಮ್ಮ ಮನ್ ಕಿ ಬಾತ್ ಕೇಳಲು ಬಂದಿದ್ದೇನೆಯೇ ಹೊರತು, ನನ್ನ ಮನ್ ಕೀ ಬಾತ್ ಹೇಳಲು ಬಂದಿಲ್ಲ.
- ಆದಿವಾಸಿ ದಲಿತರ ಮೇಲೆ ಆಗುತ್ತಿರುವ ದಬ್ಬಾಳಿಕೆ ತಡೆಯಲು ಮುಂದಾಗಬೇಕಾಗಿದೆ.
- ಉದ್ಯೋಗ ಖಾತರಿ ಯೋಜನೆಯನ್ನ 100 ರಿಂದ 150 ದಿನಗಳಿಗೆ ವಿಸ್ತರಣೆ ಮಾಡುತ್ತೇವೆ.