ಮಂಗಳೂರು : ಈ ಹಿಂದೆ ಮತದಾನ ಮಾಡಲು ಚುನಾವಣಾ ಆಯೋಗ ವೋಟರ್ ಸ್ಲಿಪ್ ಸೇರಿದಂತೆ ರೇಶನ್ ಕಾರ್ಡ್ ಗುರುತಿನ ಚೀಟಿ ತೋರಿಸಲು ಅವಕಾಶ ನೀಡಿತ್ತು, ಆದ್ರೆ ವ್ಯವಸ್ಥೆ ದುರುಪಯೋಗ ಆಗುತ್ತಿದೆ ಎಂಬ ರಾಜಕೀಯ ಪಕ್ಷಗಳ ದೂರಿನನ್ವಯ ರದ್ದುಗೊಳಿಸಲಾಗಿದೆ ಎಂದು ದ.ಕ ಜಿಲ್ಲಾ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ಆಯೋಗ ನೀಡುವ ವೋಟರ್ ಸ್ಲಿಪ್ ಗುರುತಿನ ಚೀಟಿಯಾಗಿ ಪರಿಗಣಿಸಿ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಆದರೆ ಈ ವ್ಯವಸ್ಥೆ ದುರುಪಯೋಗ ಆಗುತ್ತದೆ ಎಂದು ರಾಜಕೀಯ ಪಕ್ಷಗಳು ನೀಡಿದ ದೂರಿನನ್ವಯ ಈ ಬಾರಿ ವೋಟರ್ ಸ್ಲಿಪ್ ಗುರುತಿನ ಚೀಟಿಯಾಗಿ ಪರಿಗಣಿಸುತ್ತಿಲ್ಲ ಎಂದರು.
ಮತದಾನಕ್ಕೆ ಬರುವ ಸಂದರ್ಭದಲ್ಲಿ ವೋಟರ್ ಸ್ಲಿಪ್ ಜೊತೆಗೆ ಎಪಿಕ್ ಕಾರ್ಡ್ ಅಥವಾ ಚುನಾವಣಾ ಆಯೋಗ ನಿಗದಿಪಡಿಸಿದ 11 ಗುರುತಿನ ಚೀಟಿಗಳಲ್ಲಿ ಯಾವುದಾದರೂ ಒಂದನ್ನು ತರಬೇಕು. ಈ ಬಾರಿ ರೇಶನ್ ಕಾರ್ಡ್ ಅನ್ನು ಕೂಡ ಗುರುತಿನ ಚೀಟಿಯಾಗಿ ಪರಿಗಣಿಸಲಾಗುತ್ತಿಲ್ಲ. ಹೀಗಾಗಿ ರೇಶನ್ ಕಾರ್ಡ್ ತೋರಿಸಿ ಮತದಾನ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸೆಂಥಿಲ್ ಸ್ಪಷ್ಟಪಡಿಸಿದ್ದಾರೆ.