ಬೆಂಗಳೂರು: 2019ರ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಇತ್ತ ಚುನಾವಣಾ ಅಧಿಕಾರಿಗಳು ಮತದಾನದ ಕುರಿತು ಹಲವಾರು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಅದೇ ರೀತಿ ಸಾಮಾನ್ಯ ಜನರೂ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಇದೀಗ ಚಿನ್ನದ ಅಂಗಡಿಯೊಂದು ಮತದಾನ ಮಾಡಿದ ಮತದಾರರಿಗೆ ಬೆಳ್ಳಿಯನ್ನು ಉಚಿತವಾಗಿ ನೀಡಲು ಮುಂದಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ಯಲಹಂಕದ ಬಸ್ ನಿಲ್ದಾಣದ ಮುಂದೆ ಇರುವ ಸುಮತಿ ಜುವೆಲರ್ಸ್ ಮಾಲೀಕರು ಈ ಆಫರ್ ನೀಡಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ, ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕು. ಅದಕ್ಕಾಗಿ ಮತದಾನದ ಅವಶ್ಯಕತೆ ಇದೆ. ಪೂರ್ಣ ಪ್ರಮಾಣದ ಮತದಾನದ ಆಸೆ ಹೊಂದಿರುವ ಅಂಗಡಿಯ ಮಾಲೀಕ ನವೀನ್ ಮತದಾನ ಮಾಡಿ ಬರುವ ಮತದಾರರಿಗೆ ಹೊಸ ಆಫರ್ ನೀಡಿದ್ದಾರೆ.
ಮತದಾನ ಮಾಡಿ ಈ ಜ್ಯುವೆಲ್ಸ್ಗೆ ಬಂದು ತಮ್ಮ ಮತದಾನದ ಗುರುತ್ತನ್ನು ತೋರಿಸಿ ಚಿನ್ನವನ್ನು ಖರೀದಿ ಮಾಡಿದ್ರೆ ಎಷ್ಟು ಚಿನ್ನವನ್ನು ಖರೀದಿ ಮಾಡಿದ್ದಾರೋ ಅಷ್ಟು ಬೆಳ್ಳಿಯನ್ನು ಉಚಿತವಾಗಿ ನೀಡುತ್ತೇವೆ. ಇದರಿಂದ ಸಾರ್ವಜನಿಕರು ಹೆಚ್ಚು ಮತದಾನ ಮಾಡುತ್ತಾರೆ ಅನ್ನೋ ಆಸೆಯಿಂದ ಈ ರೀತಿ ಮಾಡುತ್ತಿದ್ದೇವೆ ಎಂದು ಚಿನ್ನದ ಅಂಗಡಿಯ ಮಾಲೀಕರು ಹೇಳುತ್ತಾರೆ.
ಇನ್ನು ಈ ರೀತಿ ಆಫರ್ ನೀಡಿ ಜನರನ್ನು ಮತದಾನ ಮಾಡುವಂತೆ ಜಾಗೃತಿ ಮೂಡಿಸುತ್ತಿರುವ ಮಾಲೀಕರಿಗೆ ಗ್ರಾಹಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ರೀತಿ ಯಾರೂ ಮಾಡುವುದಿಲ್ಲ. ನಾವು ತುಂಬಾ ವರ್ಷಗಳಿಂದ ಇಲ್ಲಿ ಚಿನ್ನವನ್ನು ಖರೀದಿ ಮಾಡುತ್ತಿದ್ದೇವೆ. ಇದು ಒಂದು ರೀತಿಯ ಹೊಸ ಪ್ರಯತ್ನ. ಇದರಿಂದಲಾದರೂ ಮತದಾರರು ತಪ್ಪದೇ ಮತದಾನ ಮಾಡಬೇಕು ಎಂದು ಗ್ರಾಹಕರೊಬ್ಬರು ಮನವಿ ಮಾಡುತ್ತಾರೆ.