ಮೈಸೂರು: ಕೆಂಪು ಕೋಟೆ ಮೇಲೆ ರಾಷ್ಟ್ರ ಬಾವುಟ ಹಾರಿಸಿದ ಏಕೈಕ ಕನ್ನಡಿಗ ಅಂದ್ರೆ ದೇವೇಗೌಡರು ಮಾತ್ರ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಕೊಂಡಾಡಿದರು.
ಜಿಲ್ಲೆಯ ಜಯಪುರ ಗ್ರಾಮದಲ್ಲಿ ನಡೆದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಪರ ಮತಯಾಚನೆ ಸಮಾವೇಶದಲ್ಲಿ ಅವರು ಮಾತನಾಡಿದರು. ದೇವೇಗೌಡರ ಆಡಳಿತದಲ್ಲಿ ಎಲ್ಲೂ ಕೋಮುಗಲಭೆ ನಡೆಯಲಿಲ್ಲ. ದೇಶದಲ್ಲಿ ಸಾಮರಸ್ಯ ಇತ್ತು ಇಬ್ರಾಹಿಂ ಹೇಳಿದರು. ಇನ್ನು ಸಿದ್ದರಾಮಯ್ಯ ಮತ್ತು ದೇವೇಗೌಡ್ರು ಅಧಿಕಾರದಲ್ಲಿ ಇದ್ದಾಗ ರಾಜ್ಯಾದ್ಯಂತ ಅಭಿವೃದ್ಧಿ ಕೆಲಸಗಳು ನಡೆದಿದ್ದವು. ಏನೋ ಕೆಟ್ಟ ಗಳಿಗೆ ಅವರನ್ನ ಬೇರೆ ಮಾಡಿತ್ತು. ಆದ್ರೆ ಸಮಯ ಕೂಡಿ ಬಂದಿದೆ. ನೀವೆಲ್ಲ ಎಚ್ಚೆತ್ತುಕೊಂಡು ಮತ್ತೆ ಕಾಂಗ್ರೆಸ್ ಗೆಲ್ಲುವಂತೆ ಮಾಡಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಉತ್ತರ ಭಾರತದಲ್ಲಿ ಎಲ್ಲಿಯಾದರೂ ದಾಸೋಹ ಭವನಗಳು ನಡೆಯುತ್ತಿದ್ಯಾ, ದಕ್ಷಿಣ ಭಾರತದಲ್ಲಿ ತುಮಕೂರಿನ ಶ್ರೀಸಿದ್ದಗಂಗಾ ಮಠ, ಸುತ್ತೂರು ಮಠ ಸೇರಿದಂತೆ ಅನೇಕ ಮಠಗಳು ದಾಸೋಹದ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿವೆ. ಇಂತಹ ಸಮಾಜದ ಕೆಲಸ ಮಾಡಲು ಮೋದಿ ಎರಡು ತಿಂಗಳ ಕಾಲ ಕರ್ನಾಟಕದಲ್ಲಿ ತರಬೇತಿ ಪಡೆಯಲಿ ಎಂದರು. ಮೋದಿ 56 ಇಂಚಿನ ಎದೆ ಇದ್ದು ಏನು ಪ್ರಯೋಜನವಾಗಿದೆ. ಮಾನವೀಯ ಗುಣಗಳು ಇಲ್ಲ. ಹೆಚ್.ಡಿ.ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರನ್ನು ನೋಡಿ ಮೋದಿ ಕಲಿಯಬೇಕಿದೆ ಎಂದು ಇಬ್ರಾಹಿಂ ಕುಟುಕಿದರು.
ಬಳಿಕ ಜಿ.ಟಿ. ದೇವೇಗೌಡ ಮಾತನಾಡಿ, ದೊಡ್ಡವರಿಗಾಗಿ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದೀವಿ. ಈಗ ಅವರೆಲ್ಲ ಒಂದಾಗಿದ್ದಾರೆ. ನಾವೆಲ್ಲರೂ ಸಹ ಹಳೆಯ ವೈಷ್ಯಮ್ಯ ಮರೆತು ಮತ್ತೆ ಒಂದಾಗಬೇಕಿದೆ ಎಂದರು.