ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ನಡೆಸಿದರು.
ಮತಯಾಚನೆ ಬಳಿಕ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಲೋಕಸಭಾ ಸದಸ್ಯರಾಗಿರುವ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಅಭಿವೃದ್ಧಿಗಾಗಿ ಈ ಬಾರಿ ತನಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದೇನೆ. ಕರ್ನಾಟಕದ ಹುಡುಗ ಕನ್ನಡಿಗರಿಗಾಗಿ ಧ್ವನಿ ಎತ್ತುವುದಕ್ಕೆ ಬೆಂಗಳೂರನ್ನು ಉಳಿಸಲು ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದ ಅನುದಾನವನ್ನು ಕೆಂದ್ರದಿಂದ ತರಲು ನನ್ನನ್ನು ಗೆಲ್ಲಿಸಿ. ಸದಾಕಾಲವೂ ನಿಮ್ಮೊಂದಿಗೆ ನಾನು ಇರುತ್ತೇನೆ ಎಂದರು.
ನಾನು ಕಳೆದ ಬಾರಿ ಚುನಾವಣೆಯಲ್ಲಿ ಸೋತರು ಮಹಾದೇವಪುರಕ್ಕೆ ನೂರು ಕೋಟಿ ಅನುದಾನ ತಂದು ಕೊಟ್ಟಿದ್ದೇನೆ. ಆದರೆ ಗೆದ್ದ ಅಭ್ಯರ್ಥಿ ಈ ಕ್ಷೆತ್ರಕ್ಕೆ ಏನು ಮಾಡಿದ್ದಾರೆ. ಬೆಂಗಳೂರು ಸಾಕಷ್ಟು ಅಭಿವೃದ್ಧಿ ಕಂಡಿದೆ. ಆದರೆ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಹೀಗಾಗಿ ಮೋದಿಗೆ ಮತ ನೀಡಿ ಎಂದು ಕೇಳುತ್ತಿದ್ದಾರೆ. ಹಾಗಾದರೆ ಕ್ಷೇತ್ರಕ್ಕೆ ಅವರ ಕೊಡುಗೆ ಏನು. ನೀವೇ ಯೋಚನೆ ಮಾಡಿ. ಯಾರು ಕೆಲಸ ಮಾಡುತ್ತಾರೋ ಅಂತವರಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಬೆಳ್ಳಂದೂರು, ಹರಳೂರು, ಹಾಲನಾಯಕನಹಳ್ಳಿ, ಕೊಡತಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮತಯಾಚನೆ ಮಾಡಿದರು. ಪ್ರಚಾರದ ವೇಳೆ ಹಗದೂರು ಕಾರ್ಪೊರೇಟರ್ ಉದಯ್ ಕುಮಾರ್, ವರ್ತೂರು ಸುರೇಶ್, ಆನೇಕಲ್ ಶಾಸಕ ಶಿವಣ್ಣ ಹಾಗೂ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.