ಶಿವಮೊಗ್ಗ : ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೆಗೌಡರು ಹಾಗೂ ಇಡೀ ಕ್ಯಾಬಿನೆಟ್‌ನ ಸಚಿವರು ಇಲ್ಲಿ ಬಂದು ಪ್ರಚಾರ ಮಾಡುತ್ತಿದ್ದಾರೆ. ಅದರ ಜೊತೆಗೆ ಅಧಿಕಾರವನ್ನೂ ದುರುಪಯೋಗಪಡಿಸಿಕೊಳ್ಳುವ ಮೂಲಕ ಹಣ, ಹೆಂಡ ಹಂಚಿ ಚುನಾವಣೆ ನಡೆಸುತ್ತಿದ್ದಾರೆ ಎಂದು ಬಿ.ವೈ.ರಾಘವೇಂದ್ರ ಆರೋಪಿಸಿದರು.
ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದೆ. ಚುನಾವಣಾ ಕಣ ರಂಗೇರುತ್ತಿದೆ. ಅದರಂತೆ ಇಂದು ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ಭರ್ಜರಿ ರೋಡ್ ಶೋ ನಡೆಸುವ ಮೂಲಕ ಪ್ರಚಾರ ಮಾಡಿದರು. ರಾಮಣ್ಣ ಶೆಟ್ಟಿ ಪಾರ್ಕನಿಂದ ಪ್ರಾರಂಭವಾದ ರೋಡ್ ಶೋ ನಗರದ ಪ್ರಮುಖ ರಸ್ತೆಗಳ ಮೂಲಕ ಬಿಜೆಪಿ ಜಿಲ್ಲಾ ಕಚೇರಿವರೆಗೆ ಸಾಗಿತು.
ಈಶ್ವರಪ್ಪನವರೆ ರಾಘವೇಂದ್ರನನ್ನು ಸೋಲಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಎಚ್.ಡಿ.ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಅವರ ಪಕ್ಷದ ಅನುಭವದ ಮೇಲೆ ಹೇಳುತ್ತಿದ್ದಾರೆ, ನಮ್ಮ ಪಕ್ಷದ ನಾಯಕರಾಗಲಿ ಅಥವಾ ಕಾರ್ಯಕರ್ತರಾಗಲಿ ಇಂತಹ ಯೋಚನೆಯನ್ನು ಮಾಡಲ್ಲ ಎಂದು ರೇವಣ್ಣರಿಗೆ ಟಾಂಗ್ ನೀಡಿದರು.
ಒಂದೆಡೆ ಮೈತ್ರಿ ಪಕ್ಷದ ನಾಯಕರುಗಳು ಸುದ್ದಿಗೋಷ್ಠಿಗಳ ಮೇಲೆ ಸುದ್ದಿಗೋಷ್ಠಿ ನಡೆಸುತ್ತಿದ್ದರೆ, ಬಿಜೆಪಿ ನಾಯಕರು ರೋಡ್ ಶೋ ನಡೆಸುವ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಲೋಕಸಭಾ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ರೋಡ್ ಶೋದಲ್ಲಿ ಎ. ಮಂಜು ಹಾಗೂ ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಸಾಥ್ ನೀಡಿದರು.