ನವದೆಹಲಿ: ಲೋಕಸಭಾ ಚುನಾವಣೆಯ ಮೂರನೇ ಹಾಗೂ ಅತಿದೊಡ್ಡ ಹಂತದ ಮತದಾನ ಪ್ರಕ್ರಿಯೆ ಇಂದು ದೇಶದ 14 ರಾಜ್ಯಗಳ 116 ಕ್ಷೇತ್ರಗಳಲ್ಲಿ ನಡೆಯಲಿದೆ.
ಅಸ್ಸೋಂ(4), ಬಿಹಾರ(5), ಛತ್ತೀಸ್ಗಢ(7), ಕರ್ನಾಟಕ(14), ಮಹಾರಾಷ್ಟ್ರ(14), ಒಡಿಶಾ(6), ಉತ್ತರ ಪ್ರದೇಶ(10), ಪಶ್ಚಿಮ ಬಂಗಾಳ(5), ಗೋವಾ(2), ಗುಜರಾತ್(26),ಕೇರಳ(20) ದಾದ್ರ ಮತ್ತು ನಗರಹವೇಲಿ ಹಾಗೂ ದಿಯು ಮತ್ತು ದಮನ್ನ ಒಂದೊಂದು ಕ್ಷೇತ್ರಗಳಲ್ಲಿ ಇಂದು ಮತದಾನ ಜರುಗಲಿದೆ. ಕಳೆದ ಹಂತದ ಮತದಾನದ ವೇಳೆ ಮುಂದೂಡಲ್ಪಟ್ಟಿದ್ದ ಪೂರ್ವ ತ್ರಿಪುರಾದ ಕ್ಷೇತ್ರಕ್ಕೂ ಇಂದೇ ವೋಟಿಂಗ್ ನಡೆಯಲಿದೆ. ಜೊತೆಗೆ ಜಮ್ಮು ಕಾಶ್ಮೀರದ ಅನಂತ್ನಾಗ್ ಲೋಕಸಭಾ ಕ್ಷೇತ್ರದಲ್ಲೂ ಇಂದು ವೋಟಿಂಗ್ ಜರುಗಲಿದೆ.
ಮೂರನೇ ಹಂತದ ಮತದಾನದಲ್ಲಿ 18.56 ಕೋಟಿ ಜನ ಹಕ್ಕು ಚಲಾಯಿಸಲು ಅರ್ಹರಾಗಿದ್ದು, 2.10 ಲಕ್ಷ ಮತಕೇಂದ್ರಗಳನ್ನು ಚುನಾವಣಾ ಆಯೋಗ ನಿರ್ಮಿಸಿದೆ. ಮೊದಲ ಹಂತದ(ಏಪ್ರಿಲ್ 11) ಚುನಾವಣೆಯಲ್ಲಿ ಶೇ.69.43ರಷ್ಟು ಮತದಾನವಾಗಿದ್ದರೆ, ಎರಡನೇ ಹಂತದಲ್ಲಿ(ಏಪ್ರಿಲ್ 18) ಶೇ.62ರಷ್ಟು ವೋಟಿಂಗ್ ನಡೆದಿತ್ತು.
ಈ ಬಾರಿಯ ಲೋಕಸಭಾ ಚುನಾವಣೆ ಒಟ್ಟು ಏಳು ಹಂತದಲ್ಲಿ ನಡೆಯುತ್ತಿದ್ದು, ಇಂದಿನ ಮೂರನೇ ಹಂತ ಮುಕ್ತಾಯದೊಂದಿಗೆ ದಕ್ಷಿಣದ ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಕೊನೆಗೊಳ್ಳಲಿದೆ.
ಕಣದಲ್ಲಿರುವ ಪ್ರಮುಖರು:
ಮೂರನೇ ಹಂತದ ಲೋಕಸಮರದ ಕಣದಲ್ಲಿ ಘಟಾನುಘಟಿ ನಾಯಕರ ದಂಡೇ ಇದೆ.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ(ಗಾಂಧಿನಗರ), ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ(ವಯನಾಡು), ಶಶಿ ತರೂರ್(ತಿರುವನಂತಪುರಂ), ಅಜಂ ಖಾನ್(ರಾಂಪುರ), ಜಯಪ್ರದಾ(ರಾಂಪುರ) ಮೂರನೇ ಹಂತದ ಮತದಾನದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.
ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಸೋಲಿನ ಭೀತಿಯಿಂದ ಕೇರಳದ ವಯನಾಡಿನಲ್ಲಿ ಸ್ಪರ್ಧೆಗಿಳಿದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭವಿಷ್ಯವನ್ನು ದೇವರ ನಾಡಿನ ಜನತೆ ಇಂದು ನಿರ್ಧರಿಸಲಿದ್ದಾರೆ.