ನವದೆಹಲಿ: ದೇಶದ ಬಹುತೇಕ ಜನರು ಭದ್ರತೆಗಿಂತ ಆರ್ಥಿಕ ಸಮಸ್ಯೆಗಳ ಬಗ್ಗೆ ಹೆಚ್ಚು ಚಿಂತಾಕ್ರಾಂತರಾಗಿದ್ದು, ನಿರುದ್ಯೋಗದ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ ಎಂದು ಸಿ-ವೋಟರ್-ಐಎಎನ್ಎಸ್ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
ಏಪ್ರಿಲ್ 26ರಂದು ನಡೆಸಿದ ಸಮೀಕ್ಷೆಗೆ 11,672 ಸಂವಾದಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಅದರಲ್ಲಿ ಶೇ 28.42 ಜನರು ನಿರುದ್ಯೋಗವೇ ತಮ್ಮ ಮುಖ್ಯ ಕಾಳಜಿ ಎಂದಿದ್ದಾರೆ. ಶೇ 57.04ರಷ್ಟು ಜನರು ಆರ್ಥಿಕ ತೊಡರುಗಳು ದೇಶದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ ಎಂದು ಒಪ್ಪಿಕೊಂಡರೆ, ಶೇ 11.74ರಷ್ಟು ಮಂದಿ ಭದ್ರತೆ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.
ಸಮೀಕ್ಷೆ ಪ್ರಕ್ರಿಯೆ ಆರಂಭಿಸುವ ಮೊದಲು ನಿರುದ್ಯೋಗ ಅಗ್ರ ಸ್ಥಾನದಲ್ಲಿತ್ತು. ಆದರೆ, ಮಾರ್ಚ್ ಮಧ್ಯದಲ್ಲಿ ಭದ್ರತಾ ಸಮಸ್ಯೆ ಕೊನೆಯಲ್ಲಿ ಉಳಿದು ಆರ್ಥಿಕ ಭದ್ರತೆ ಮುನ್ನೆಲೆಗೆ ಬಂದಿದೆ.
ಮಾರ್ಚ್ ಮೊದಲ ವಾರದಲ್ಲಿ ನಡೆದ ಸಮೀಕ್ಷೆಯಲ್ಲಿ ಭಯೋತ್ಪಾದನೆ ವಿಷಯ ನಿರುದ್ಯೋಗವನ್ನು ಹಿಂದಿಕ್ಕಿ ಮುಖ್ಯ ವಿಚಾರವಾಗಿತ್ತು. ಈ ವೇಳೆ ಶೇ 26.12ರಷ್ಟು ಜನರು ಉಗ್ರರ ದಾಳಿ ಬಗ್ಗೆ ಆತಂಕಗೊಂಡಿದ್ದರೇ ಶೇ 21.74ರಷ್ಟು ಜನರು ನಿರುದ್ಯೋಗದ ಕುರಿತು ಕಾಳಜಿ ತೋರಿದ್ದರು.
ನಿರುದ್ಯೋಗದ ಸವಾಲು ಮೇಲ್ಮುಖವಾಗಿ ಸಾಗುತ್ತಿದ್ದಂತೆ ಭದ್ರತೆಯನ್ನು ಕಡಿಮೆ ಆದ್ಯತೆಯ ವಿಚಾರವಾಗಿ ಪರಿಗಣಿಸಲಾಗಿದೆ. ಏಪ್ರಿಲ್ 27ರಂದು ಆರ್ಥಿಕ ಮತ್ತು ಭದ್ರತಾ ಸಮಸ್ಯೆಗಳ ಅಂತರ ಶೇ 45.3ರಷ್ಟು ಇರುವುದಾಗಿ ತಿಳಿದುಬಂದಿದೆ.
ರಾಜ್ಯವಾರು ಸಂವಾದಿಗಳ ಪೈಕಿ ಪಂಜಾಬ್ ರಾಜ್ಯದವರು ಶೇ 49.21ರಷ್ಟು ನಿರುದ್ಯೋಗದ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರ- ಶೇ 44.63 (698 ಸಂವಾದಿ), ಉತ್ತರಾಖಂಡ್- ಶೇ 43.10 (562 ಸಂವಾದಿ), ಝಾರ್ಖಂಡ- ಶೇ 39.72 (403 ಸಂವಾದಿ), ದೆಹಲಿ- ಶೇ 37.11 (316 ಸಂವಾದಿ) ಮತ್ತು ಮಧ್ಯಪ್ರದೇಶ- ಶೇ 33.95ರಷ್ಟು (413 ಸಂವಾದಿ) ನಿರುದ್ಯೋಗವೇ ತಮ್ಮ ಪ್ರಾತಿನಿಧ್ಯ ಎಂದು ಒಪ್ಪಿಕೊಂಡಿದ್ದಾರೆ.
ಇದರಲ್ಲಿ ಕರ್ನಾಟಕ ಭ್ರಷ್ಟಾಚಾರ- ಶೇ 12.38, ನಿರುದ್ಯೋಗ- ಶೇ 24.27, ಕುಟುಂಬ ಆದಾಯ/ ಬಡತನ- ಶೇ 17.96, ಬೆಲೆ ಏರಿಕೆ- ಶೇ 3.88, ವಿದ್ಯುತ್/ರಸ್ತೆ/ನೀರು- ಶೇ 7.18, ಉಗ್ರರ ದಾಳಿ- ಶೇ 7.17, ಇತರೆ ಸವಾಲು- ಶೇ 18.15, ಏನು ಹೇಳಲ್ಲ- ಶೇ 9.01, ಆರ್ಥಿಕ ಸಮಸ್ಯೆ- ಶೇ 65.67, ಭದ್ರತಾ ಸವಾಲು- ಶೇ 7.17 ಹಾಗೂ ಸ್ಥಳೀಯ ಸವಾಲು ಶೇ 18.15 ರಷ್ಟಿದೆ ಎಂದು ಹೇಳಿದ್ದಾರೆ.