ಸೀತಾಮಢಿ: ಬಿಹಾರದ ಸೀತಾಮಢಿಯಲ್ಲಿ 2 ಸಾವಿರ ರೂಪಾಯಿಗಾಗಿ ಪತ್ನಿಯೊಬ್ಬಳು ಪತಿಯನ್ನು ಹೀನಾಯವಾಗಿ ಥಳಿಸಿ ಆ್ಯಸಿಡ್ ಎರಚಿರುವ ಘಟನೆ ನಡೆದಿದೆ. ರಿಗಾ ಪೊಲೀಸ್ ಠಾಣೆ ವ್ಯಾಪ್ತಿಯ ಶಹಬಾಜ್‌ಪುರ ಗ್ರಾಮದಲ್ಲಿ ಇಂತಹದ್ದೊಂದು ಘಟನೆ ವರದಿಯಾಗಿದೆ. ಪತ್ನಿಯೊಬ್ಬಳು ತನ್ನ ಪತಿಯನ್ನು ತನ್ನ ತಾಯಿಯ ಮನೆಗೆ ಕರೆಯಿಸಿಕೊಂಡಿದ್ದಾಳೆ. ಬಳಿಕ ಕುಟುಂಬ ಸದಸ್ಯರೊಡಗೂಡಿ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಹಣ್ಣುಗಾಯಿ ನೀರುಗಾಯಿ ಆಗುವಂತೆ ಪತಿಯನ್ನು ಥಳಿಸಿದ್ದರೂ ಹೆಂಡತಿಯ ಕೋಪ ಮಾತ್ರ ತಣ್ಣಗಾಗಿಲ್ಲ. ಜಗಳದ ವೇಳೆ ಗಂಡನ ಕಣ್ಣಿಗೆ ಆ್ಯಸಿಡ್ ಕೂಡ ಹಾಕಿ ಭಾರಿ ವಿಕೃತಿ ಮೆರದಿದ್ದಾರೆ. ಮಹಿಳೆಯ ಕುಟುಂಬದವರೆಲ್ಲ ಸೇರಿ ಥಳಿಸುತ್ತಿರುವ ಸುದ್ದಿಯನ್ನು ಸ್ಥಳೀಯರು ನೋಡಿದ್ದು, ಈ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದೇ ವೇಳೆ ಸಂತ್ರಸ್ತನ ಸಂಬಂಧಿಕರಿಗೆ ಘಟನೆಯ ಬಗ್ಗೆ ಮಾಹಿತಿ ಕೂಡಾ ನೀಡಲಾಗಿದೆ.
10 ವರ್ಷಗಳ ಹಿಂದೆ ನಡೆದ ಪ್ರೇಮ ವಿವಾಹ: ನಾಗೇಶ್ವರ್ ಸಿಂಗ್ ಎಂಬ ಈ ವ್ಯಕ್ತಿ 10 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ರಿಗಾ ಪೊಲೀಸ್ ಠಾಣೆ ವ್ಯಾಪ್ತಿಯ ಶಹಬಾಜ್‌ಪುರ ಗ್ರಾಮದ ರಾಮದಯಾಳ್ ಶಾ ಅವರ ಪುತ್ರಿ ಪಾರ್ವತಿ ಕುಮಾರಿಯೊಂದಿಗೆ ಈ ಮದುವೆ ನಡೆದಿತ್ತು. ನಾಗೇಶ್ವರ್‌ಗೆ ಒಬ್ಬ ಮಗನಿದ್ದಾನೆ. ಸುಖ ಸಂಸಾರವನ್ನೇ ಇಬ್ಬರು ನಡೆಸಿದ್ದಾರೆ.
ಆದರೆ, 15 ದಿನಗಳ ಹಿಂದೆ ಪತಿ-ಪತ್ನಿ ನಡುವೆ 2 ಸಾವಿರ ರೂ.ಗಾಗಿ ಜಗಳ ನಡೆದಿತ್ತು. ಈ ಜಗಳದ ಬಳಿಕ ಪತ್ನಿ ತನ್ನ ತಾಯಿಯ ಮನೆಯಲ್ಲಿ ವಾಸವಾಗಿದ್ದಳು. ಮಂಗಳವಾರ ತಡರಾತ್ರಿ ಪತ್ನಿ ಪಾರ್ವತಿ ದೇವಿ ತನ್ನ ಪತಿ ನಾಗೇಶ್ವರ್ ಸಿಂಗ್ಗೆ ಕರೆ ಮಾಡಿ ಮನೆಗೆ ಕರೆಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಮನೆಗೆ ಬಂದ ಗಂಡನ ಮೇಲೆ ಸಂಬಂಧಿಕರ ಜತೆಗೂಡಿ ಥಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ನಾಗೇಶ್ವರ್ ಸಿಂಗ್ ಅವರನ್ನು ಅವರ ಸಹೋದರ ವಿಕಾಸ್ ಸಿಂಗ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪತಿ ಮೇಲೆ ಆ್ಯಸಿಡ್ ಎರಚಿದ ಪತ್ನಿ: ಕುಟುಂಬದವರ ಜತೆಗೂಡಿ ಗಂಡನನ್ನು ಥಳಿಸಿದ ಪಾರ್ವತಿ ಕುಮಾರಿ, ಕಣ್ಣಿಗೆ ಆ್ಯಸಿಡ್ ಕೂಡಾ ಹಾಕಿದ್ದಾರೆ. ಇದರಿಂದ ನಾಗೇಶ್ವರ್ ಸಿಂಗ್ಗೆ ಕಣ್ಣು ಕಾಣದಂತಾಗಿದೆ. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ನಾಗೇಶ್ವರ್ ಅವರನ್ನು ರಿಗಾ ಪಿಎಚ್‌ಸಿಗೆ ದಾಖಲಿಸಲಾಗಿದೆ. ಅಲ್ಲಿಯೂ ಹೆಚ್ಚಿನ ಸೌಲಭ್ಯ ಇಲ್ಲದೇ ಇರುವುದರಿಂದ ಅವರನ್ನು ಸದರ್ ಆಸ್ಪತ್ರೆ ಸೀತಾಮಢಿಗೆ ಶಿಫಾರಸು ಮಾಡಲಾಗಿದ್ದು, ಅಲ್ಲಿ ಸಂತ್ರಸ್ತ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನು ಓದಿ:ಬಂಟ್ವಾಳದಲ್ಲಿ ಅಣ್ಣನ ಕೊಂದ ಸಹೋದರ.. ಮೃತದೇಹ ಸ್ವಚ್ಛಗೊಳಿಸಿ ಮಂಚದ ಮೇಲೆ ಮಲಗಿಸಿದ ತಮ್ಮ