ವಿಜಯವಾಡ(ಆಂಧ್ರ ಪ್ರದೇಶ): ಭುವಾನಿಪುರದಲ್ಲಿ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಲೈಂಗಿಕ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ತಾನಿದ್ದ ಅಪಾರ್ಟ್‌ಮೆಂಟ್ ಮೇಲಿನಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ನಿನ್ನೆಯಷ್ಟೇ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳದಲ್ಲಿ ಸೂಸೈಡ್ ನೋಟ್ ಪತ್ತೆಯಾಗಿತ್ತು. ಕೂಡಲೇ ವಿಚಾರಣೆಯನ್ನು ಕೈಗೊತ್ತಿಕೊಂಡಿದ್ದ ಪೊಲೀಸರು ಅದೇ ಅಪಾರ್ಟ್‌ಮೆಂಟ್‌ನ 4ನೇ ಮಹಡಿಯಲ್ಲಿ ವಾಸವಾಗಿದ್ದ 55 ವರ್ಷದ ಆರೋಪಿ ವಿನೋದ್ ಜೈನ್ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಮೃತಪಟ್ಟ ವಿದ್ಯಾರ್ಥಿನಿಯೊಂದಿಗೆ ಆರೋಪಿ ವಿನೋದ್ ಜೈನ್ ಅನುಚಿತವಾಗಿ ವರ್ತಿಸುತ್ತಿದ್ದ ಎಂಬುದು ತನಿಖೆಯಿಂದ ಬಹಿರಂಗವಾಗಿದೆ. ಈತನ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಸ್ಕೋ ಕಾಯ್ದೆಯ ಸೆಕ್ಷನ್ 306 ಮತ್ತು 354ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಸ್‌ಐ ಪ್ರಸಾದ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.
ಯಾರು ಈ ವಿನೋದ್ ಜೈನ್?
ಆರೋಪಿ ವಿನೋದ್ ಜೈನ್ ಟಿಡಿಪಿಯಲ್ಲಿ ಗುರುತಿಸಿಕೊಂಡಿದ್ದು, ವಿದ್ಯಾರ್ಥಿಗೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದ ಬೆನ್ನಲ್ಲೇ ಪಕ್ಷ ಕೂಡಲೇ ಈತನನ್ನು ವಜಾ ಮಾಡಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಆರೋಪಿ, 2014ರಲ್ಲಿ 39ನೇ ಡಿವಿಷನ್‌ನಿಂದ ಬಿಜೆಪಿ ಟಿಕೆಟ್ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದ. ಆದರೆ, ಕೇಸರಿ ಪಕ್ಷ ಈತನಿಗೆ ಟಿಕೆಟ್ ನೀಡದ ಕಾರಣ ಪಕ್ಷೇತರನಾಗಿ ಕಣಕ್ಕಿಳಿದು ಸೋಲು ಕಂಡಿದ್ದ.
ಕಳೆದ ವರ್ಷ ಟಿಡಿಪಿ ಸೇರಿ 37ನೇ ಡಿವಿಷನ್‌ನಿಂದ ಕಾರ್ಪೊರೇಟ್ ಚುನಾವಣೆಯಲ್ಲಿ ಸ್ಪರ್ಧಿಸಿ ಆಗಲೂ ಪರಾಭವಗೊಂಡಿದ್ದ. ಪ್ರಸ್ತುತ ವೈಎಸ್‌ಆರ್‌ಸಿಪಿ ನಾಯಕ, ಸಚಿವ ವೆಲ್ಲಂಪಲ್ಲಿ ಮತ್ತು ಆರೋಪಿ ವಿನೋದ್ ಜೈನ್ ಒಟ್ಟಿಗೆ ಇರುವ ಫೋಟೋ ವೈರಲ್ ಆಗಿದೆ.
ವೈಎಸ್‌ಆರ್ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿರುವ ವೆಲ್ಲಪಲ್ಲಿ ಶ್ರೀನಿವಾಸ್ ವಿದ್ಯಾರ್ಥಿನಿ ಕುಟುಂಬದವರೊಂದಿಗೆ ಮಾತುಕತೆ ನಡೆಸಿದ್ದಾರೆ. ಸದ್ಯ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದಿದೆ. ಆಡಳಿತ ಹಾಗೂ ವಿಪಕ್ಷ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕ ಅಚೆನ್ ನಾಯ್ಡು, ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸಿ ವಿದ್ಯಾರ್ಥಿನಿ ಕುಟುಂಬಸ್ತರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ