ಹಾಪುರ್ (ಉತ್ತರ ಪ್ರದೇಶ): ಮೀರತ್‌ನಲ್ಲಿ ಎಐಎಂಐಎಂ ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಅವರ ಬೆಂಗಾವಲು ಪಡೆಯ ಮೇಲೆ ಗುಂಡಿನ ದಾಳಿ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಓವೈಸಿ ನೀಡುತ್ತಿದ್ದ ಹಿಂದೂ ವಿರೋಧಿ ಹೇಳಿಕೆಗಳಿಂದ ಆಕ್ರೋಶಗೊಂಡು ಗುಂಡಿನ ದಾಳಿಗೆ ಮುಂದಾಗಿದ್ದಾಗಿ ಬಂಧಿತ ಆರೋಪಿಗಳು ಪ್ರಾಥಮಿಕ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆಂದು ಹಾಪುರ್ ಎಸ್ಪಿ ದೀಪಕ್ ಭುಕರ್ ಮಾಹಿತಿ ನೀಡಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಬಂಧಿತ ಇವರು ಆರೋಪಿಗಳಿಬ್ಬರು ಸ್ನೇಹಿತರಾಗಿದ್ದಾರೆ. ಗುಂಡು ಹಾರಿಸಿದ್ದ ಕೆಲವೇ ಗಂಟೆಗಳಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಆರೋಪಿ ಸಚಿನ್ ಗ್ರೇಟರ್ ನೋಯ್ಡಾದ ಬಾದಲ್ಪುರ್ ಗ್ರಾಮದವನು ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಶುಭಂನನ್ನು ಗಾಜಿಯಾಬಾದ್ ಜಿಲ್ಲೆಯ ಸಿಹಾನಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ.
ಯುಪಿಯಲ್ಲಿ ಚುನಾವಣಾ ಪ್ರಚಾರ ಮುಗಿಸಿ ದೆಹಲಿಗೆ ವಾಪಸಾಗುತ್ತಿದ್ದ ಅಸಾದುದ್ದೀನ್ ಓವೈಸಿ ಅವರ ಬೆಂಗಾವಲು ವಾಹನದ ಮೇಲೆ ನಿನ್ನೆ ಗುಂಡು ಹಾರಿಸಲಾಗಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆ ಮುಂದಾಗಿದ್ದರು. ಸದ್ಯ ಬಂಧಿತರಿಂದ ಅಕ್ರಮವಾಗಿ ಇಟ್ಟುಕೊಂಡಿದ್ದ 9 ಎಂಎಂ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಗುಂಡಿನ ದಾಳಿ ಸಂಬಂಧ ಐದು ತಂಡಗಳನ್ನು ರಚಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮೀರತ್ ಮತ್ತು ಕಿಥೌನಲ್ಲಿ ಚುನಾವಣಾ ರೋಡ್‌ಶೋ ನಡೆಸಿದ್ದೇನೆ. ನಾನು ದೆಹಲಿಗೆ ಹಿಂತಿರುಗುವಾಗ ನನ್ನ ಕಾರಿನ ಮೇಲೆ ಗುಂಡು ಹಾರಿಸಿದ್ದಾರೆ. ಹೇಗೋ ನನ್ನ ಕಾರು ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ನಾನು ಇಬ್ಬರುನ್ನು ನೋಡಿದ್ದೇನೆ. ಒಬ್ಬ ಕೆಂಪು ಫುಲ್‌ಓವರ್ ಧರಿಸಿದ್ದರೆ ಇನ್ನೊಬ್ಬ ಬಿಳಿ ಜಾಕೆಟ್ ಧರಿಸಿದ್ದ. ದಾಳಿ ವೇಳೆ ನನ್ನ ಕಾರಿನ ಟೈರ್ ಪಂಕ್ಚರ್ ಆಯಿತು. 2-3 ಕಿ.ಮೀ ನಂತರ ನನ್ನ ಕಾರನ್ನು ಬದಲಾಯಿಸಿದೆ ಎಂದು ಘಟನೆ ಬಗ್ಗೆ ಓವೈಸಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ:ಈ ಕನ್ಯಗೆ ಮದುವೆಯಾಗುವುದೇ ಕಾಯಕ.. ಎಂಟು ವಿವಾಹ, ವರನಿಗೆ ಮಕ್ಮಲ್ ಟೋಪಿ ಹಾಕುವುದೇ ಇವಳ ಕೆಲಸ!