ಸಮಸ್ತಿಪುರ (ಬಿಹಾರ): ಸಮಸ್ತಿಪುರ ಜಿಲ್ಲೆಯ ಚಕ್ಕನ್ ಟೋಲಿ ಎಂಬ ಗ್ರಾಮದಲ್ಲಿ ಅಗ್ನಿ ಅವಘಡ ಸಂಭವಿಸಿ ಒಂದೇ ಕುಟುಂಬದ ಮೂವರ ಮೃತಪಟ್ಟಿದ್ದು, 20 ಮನೆಗಳು ಹಾಗೂ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.
ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಗ್ರಾಮಸ್ಥರೆಲ್ಲರೂ ಮಲಗಿದ್ದ ವೇಳೆ ಘಟನೆ ನಡೆದಿದೆ. ಬೆಂಕಿಯ ಜ್ವಾಲೆ ಕಾಣಿಸುತ್ತಿದ್ದಂತೆಯೇ ಎಲ್ಲರೂ ಮನೆಯಿಂದ ಹೊರ ಓಡಿ ಬಂದಿದ್ದಾರೆ. ಆದರೆ, ಗಾಢ ನಿದ್ರೆಯಲ್ಲಿದ್ದ ಒಂದು ಮನೆಯ ಮೂವರು ಮಾತ್ರ ಸಜೀವವಾಗಿ ದಹಿಸಿದ್ದಾರೆ.
ಇದನ್ನೂ ಓದಿ: ಗುಂಡಿನ ಮತ್ತಲ್ಲಿ ದುಷ್ಕೃತ್ಯ: ಕೊಡಗಿನಲ್ಲಿ ಮೂರು ಜನರ ಸಜೀವ ದಹನ, ಮೂವರ ಸ್ಥಿತಿ ಗಂಭೀರ
ಮೃತರನ್ನು ಕಿಸುನ್ ದೇವಿ (65), ಸಂಗೀತಾ ದೇವಿ (28) ಹಾಗೂ ಗಂಗಾ ಕುಮಾರಿ (8) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ದೌಡಾಯಿಸಿದ ಕಲ್ಯಾಣ್ಪುರ ಠಾಣಾ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.