ಬೇಗುಸರಾಯ್ (ಬಿಹಾರ್): ಚಲಿಸುತ್ತಿದ್ದ ರೈಲಿನ ಕಿಟಕಿಯಿಂದ ಮೊಬೈಲ್ ಕದಿಯಲು ಯತ್ನಿಸಿದ ಕಳ್ಳನೊಬ್ಬ ಸಖತ್ ಪಾಠ ಕಲಿತಿರುವ ಘಟನೆ ಬಿಹಾರದ ಬೇಗುಸರಾಯ್ ನಲ್ಲಿ ನಡೆದಿದೆ. ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಕಿಟಕಿಗೆ ಕೈ ಹಾಕಿ ಪ್ರಯಾಣಿಕರೊಬ್ಬರ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ ಕಳ್ಳ ತಕ್ಷಣ ಆತನ ಕೈ ಹಿಡಿದಿದ್ದಾನೆ. ಮತ್ತೊಬ್ಬ ಪ್ರಯಾಣಿಕ ಕಳ್ಳನ ಇನ್ನೊಂದು ಕೈ ಹಿಡಿದುಕೊಂಡಿದ್ದಾನೆ. ಅಷ್ಟರಲ್ಲಿ ನಿಲ್ದಾಣದಿಂದ ರೈಲು ಹೊರಟಿದೆ. ಸುಮಾರು 15 ಕಿಮೀವರೆಗೆ ಪ್ರಯಾಣಿಕರು ಆತನನ್ನು ಹೀಗೆ ಹಿಡಿದಿಟ್ಟುಕೊಂಡು ಸಖತ್ ಬುದ್ದಿ ಕಲಿಸಿದ್ದು, ಕಳ್ಳ 15 ಕಿಮೀ ನೇತಾಡುತ್ತಲೇ ಸಾಗಿದ್ದಾನೆ.
ಕಳ್ಳನನ್ನು ಹಿಡಿದ ಪ್ರಯಾಣಿಕರು: ಸಿಕ್ಕಿಬಿದ್ದ ಕಳ್ಳನನ್ನು ರೈಲಿನ ಪ್ರಯಾಣಿಕರು ಬೇಗುಸರಾಯ್‌ನ ಸಾಹೇಬ್‌ಪುರ ಕಮಲ್ ನಿಲ್ದಾಣದಿಂದ ಖಗಾರಿಯಾಕ್ಕೆ ಕಿಟಕಿಯಲ್ಲಿ ಕೈ ಹಿಡಿದು ನೇತಾಡಿಸುತ್ತಲೇ ಕರೆದುಕೊಂಡು ಹೋಗಿದ್ದಾರೆ. ಅತ್ತ ರೈಲು ಓಡುತ್ತಲೇ ಇತ್ತು.. ‘ನನ್ನ ಕೈ ಮುರಿಯುತ್ತದೆ.. ಬಿಟ್ಟುಬಿಡಿ’ ಎಂದು ಕಳ್ಳ ಕೂಗಾಡುತ್ತಲೇ ಇದ್ದ. ಆದರೂ ಪ್ರಯಾಣಿಕರು ಅವರನ್ನು ಬಿಡಲಿಲ್ಲ. ಸಾಹೇಬ್‌ಪುರ ಕಮಾಲ್ ನಿಲ್ದಾಣದಿಂದ ಖಗರಿಯಾದ ದೂರ 15 ಕಿಮೀ ವರೆಗೂ ಹೀಗೆ ಕಳ್ಳನನ್ನು ಪ್ರಯಾಣಿಕರು ಸತಾಯಿಸಿದ್ದಾರೆ.
ಮನಸ್ಸು ಮಾಡಿದರೆ ಟ್ರೈನ್ ನಿಲ್ಲಿಸಬಹುದಿತ್ತು: ಪ್ರಯಾಣಿಕರು ಬಯಸಿದರೆ ಚೈನ್ ಎಳೆದು ರೈಲನ್ನು ನಿಲ್ಲಿಸಬಹುದಿತ್ತು. ಆದರೆ ಪ್ರಯಾಣಿಕರು ಕಳ್ಳನಿಗೆ ಪಾಠ ಕಲಿಸಲು ನಿರ್ಧರಿಸಿದ್ದರು. ಕಿಟಕಿಯ ಹೊರಗಿನಿಂದ ನೇತಾಡಿಸುತ್ತಲೇ ಕಳ್ಳನನ್ನು 15 ಕಿಮೀ ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಕೆಲ ಪ್ರಯಾಣಿಕರು ಇದನ್ನು ವಿಡಿಯೋ ಮಾಡಿದ್ದಾರೆ. ರೈಲು ಖಗಾರಿಯಾ ನಿಲ್ದಾಣಕ್ಕೆ ಬಂದಾಗ, ರೈಲಿನಲ್ಲಿ ನೇತಾಡುತ್ತಿದ್ದ ಯುವಕನನ್ನು ವಶಕ್ಕೆ ಪಡೆಯಲು ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಅಷ್ಟರಲ್ಲೇ ಪ್ರಯಾಣಿಕರು ಕಳ್ಳನನ್ನು ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪಂಕಜ್ ಕುಮಾರ್ ಎಂಬುದು ಕಳ್ಳನ ಹೆಸರಾಗಿದೆ. ಬೇಗುಸರಾಯ್‌ನ ಸಾಹೇಬ್‌ಪುರ ಕಮಲ್ ಪೊಲೀಸ್ ಠಾಣೆಯ ನಿವಾಸಿ ಈತ. ಇನ್ನು ರೈಲ್ವೆ ಪೊಲೀಸರು ಆರೋಪಿ ಪಂಕಜ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಕಳುಹಿಸಿದ್ದಾರೆ.
ಇದನ್ನು ಓದಿ:ಜೇನುನೊಣಗಳ ದಾಳಿ: ಮಗಳ ರಕ್ಷಣೆಗೆ ಹೋದ ತಾಯಿ.. ಇಬ್ಬರೂ ದುರ್ಮರಣ