ಖಮ್ಮಮ್(ತೆಲಂಗಾಣ): ಲಿಫ್ಟ್ ಕೊಟ್ಟ ಮಾತ್ರಕ್ಕೆ ಸವಾರನೊಬ್ಬ ಸಾವಿಗೀಡಾದ ಘಟನೆ ಖಮ್ಮಮ್ ಜಿಲ್ಲೆಯ ಮುದಿಗೊಂಡಾ ಮಂಡಲ್ನ ವಲ್ಲಭಿ ಗ್ರಾಮದ ಬಳಿ ನಡೆದಿದೆ. ಬೈಕ್‌ನಲ್ಲಿ ಹೋಗುತ್ತಿದ್ದವನೊಬ್ಬ ದಾರಿ ಮಧ್ಯೆ ಇಬ್ಬರು ನಿಲ್ಲಿಸಿದ್ದಾರೆ. ತಮ್ಮ ಗಾಡಿಯಲ್ಲಿ ಪೆಟ್ರೋಲ್ ಖಾಲಿಯಾಗಿದ್ದು, ಬಂಕ್ವರೆಗೆ ಒಂಚೂರು ಲಿಫ್ಟ್ ಕೊಡು ಎಂದಿದ್ದಾರೆ. ಆಯ್ತು ಎಂದ ಬೈಕ್ ಸವಾರ ಜಮಾಲ್ ಒಬ್ಬನನ್ನು ಹಿಂದೆ ಕೂರಿಸಿಕೊಂಡು ಹೊರಟಿದ್ದಾನೆ. ಆದರೆ ಬೈಕ್ ಮೇಲೆ ಕೂರುತ್ತಲೇ ಹಿಂದಿನ ವ್ಯಕ್ತಿಯು ಜಮಾಲ್ಗೆ ಮಾರಣಾಂತಿಕವಾದ ಇಂಜೆಕ್ಷನ್ ಚುಚ್ಚಿ ಪರಾರಿಯಾಗಿದ್ದಾನೆ.
ಇಂಜೆಕ್ಷನ್ನಿಂದ ಸಾವಿಗೀಡಾದ ವ್ಯಕ್ತಿಯನ್ನು ಬೊಪ್ಪರಮ್ ಗ್ರಾಮದ ಜಮಾಲ್ ಸಾಹೇಬ್ ಎಂದು ಗುರುತಿಸಲಾಗಿದೆ. ಈ ಕೊಲೆಯಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಜಮಾಲ್ ಸಾಹೇಬ್ ಆಂಧ್ರಪ್ರದೇಶದ ಗಡಿಭಾಗದ ಜಗ್ಗಯ್ಯಪೇಟ್ ಮಂಡಲದಲ್ಲಿರುವ ಗಂಡ್ರೈ ಗ್ರಾಮದಿಂದ ಪತ್ನಿಯನ್ನು ವಾಪಸ್ ಕರೆತರಲು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಈ ದಾರುಣ ಘಟನೆ ನಡೆದಿದೆ. ಸೋಮವಾರ ಬೆಳಗ್ಗೆ ಜಮಾಲ್ ತನ್ನ ಗ್ರಾಮ ಬೊಪ್ಪರಂನಿಂದ ಬೈಕ್‌ನಲ್ಲಿ ತೆರಳಿದ್ದ. ಮುಡಿಗೊಂಡ ಮಂಡಲದ ವಲ್ಲಭಿ ಎಂಬಲ್ಲಿಗೆ ಬಂದಾಗ ಇಬ್ಬರು ವ್ಯಕ್ತಿಗಳು ಅವರನ್ನು ರಸ್ತೆಯಲ್ಲಿ ನಿಲ್ಲಿಸಿ ಲಿಫ್ಟ್ ಕೇಳಿದರು.
ತಮ್ಮ ವಾಹನದಲ್ಲಿ ಪೆಟ್ರೋಲ್ ಮುಗಿದು ಹೋಗಿದ್ದು, ಹತ್ತಿರದ ಬಂಕ್‌ನಿಂದ ಪೆಟ್ರೋಲ್ ತರಬೇಕಾಗಿದೆ ಎಂದು ಹೇಳಿದರು. ಯಾವುದೇ ಸಂಶಯ ಪಡದ ಜಮಾಲ್ ಇದಕ್ಕೆ ಒಪ್ಪಿದ್ದಾನೆ.
ಜಮಾಲ್ ತನ್ನ ವಾಹನವನ್ನು ಸ್ವಲ್ಪ ದೂರದವರೆಗೆ ಓಡಿಸಿದ ನಂತರ ಅವನಿಗೆ ಬೆನ್ನಲ್ಲಿ ಏನೋ ಚುಚ್ಚಿದ ಅನುಭವವಾಗಿದೆ. ಗಾಡಿಯಲ್ಲಿ ಹಿಂದೆ ಕುಳಿತಿದ್ದವ ಮುಸುಕು ಹಾಕಿಕೊಂಡು ಜಮಾಲ್ ಸಾಹೇಬ್‌ನ ಬೆನ್ನಿಗೆ ಸಿರಿಂಜ್‌ನಿಂದ ಚುಚ್ಚಿದ್ದ. ಇದರಿಂದ ಜಮಾಲ್ ತನ್ನ ವಾಹನದ ವೇಗ ನಿಧಾನಗೊಳಿಸಿದ್ದಾನೆ.
ಇಷ್ಟರಲ್ಲೇ ಆತನಿಗೆ ತಲೆತಿರುಗಲು ಆರಂಭವಾಗಿದೆ. ಏನಾಯಿತು ಎಂದು ಅರ್ಥಮಾಡಿಕೊಳ್ಳುವಷ್ಟರಲ್ಲಿ ಆತನ ಹಿಂದೆಯೇ ಇನ್ನೊಂದು ಬೈಕ್‌ನಲ್ಲಿ ಬರುತ್ತಿದ್ದ ಮತ್ತೊಬ್ಬ ಆರೋಪಿಯ ಬೈಕ್ ಹತ್ತಿ ಪರಾರಿಯಾಗಿದ್ದಾನೆ. ಜಮಾಲ್ ತನ್ನ ದೇಹದ ಮೇಲೆ ಸಂಪೂರ್ಣ ಹತೋಟಿ ಕಳೆದುಕೊಳ್ಳುವ ಮುನ್ನ ಒಂದಿಷ್ಟು ದೂರ ಬೈಕ್ ಚಲಾಯಿಸಿದ್ದಾನೆ. ನಂತರ ರಸ್ತೆ ಬದಿ ಕುಸಿದು ಕುಳಿತಿದ್ದಾನೆ. ರಸ್ತೆಯಲ್ಲಿ ಹೋಗುವವರಿಗೆ ನೀರು ಬೇಕೆಂದು ಕೇಳಿ, ತನ್ನ ಹೆಂಡತಿಗೆ ಕರೆ ಮಾಡುವಂತೆ ಕೇಳಿಕೊಂಡಿದ್ದಾನೆ.
ಪತ್ನಿಯು ಫೋನ್ ಸ್ವೀಕರಿಸದ ಕಾರಣ ಜಮಾಲ್ ಸಾಹೇಬ್, ಮುಸುಕುಧಾರಿಗಳು ಮತ್ತು ತನಗೆ ನೀಡಿದ ಚುಚ್ಚುಮದ್ದಿನ ಬಗ್ಗೆ ಸ್ಥಳೀಯರಿಗೆ ತಿಳಿಸಿ ಮೂರ್ಛೆ ಹೋಗಿದ್ದಾನೆ. ಸ್ಥಳೀಯರು ಆತನನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ ಜಮಾಲ್ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಅಲ್ಲಿ ಒಂದು ಸಿರಿಂಜ್ ಬಿದ್ದಿರುವುದು ಕಂಡು ಬಂದಿದೆ. ಮೃತರ ಅಳಿಯ ಲಾಲ್ ಸಾಹೇಬ್ ನೀಡಿದ ದೂರಿನ ಮೇರೆಗೆ ಖಮ್ಮಮ್ ಗ್ರಾಮಾಂತರ ಸಿಐ ಶ್ರೀನಿವಾಸ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಮಾಲ್ ಸಾಹೇಬ್ಗಿಂತ ಮೊದಲು ಆರೋಪಿಗಳು ಮೈಸಯ್ಯ ಎಂಬುವರ ಬಳಿ ಲಿಫ್ಟ್ ಕೇಳಿದ್ದರು. ಮೈಸಯ್ಯ ಬೈಕ್ ನಿಲ್ಲಿಸಿದರೂ ಹತ್ತಲಿಲ್ಲ. ನಂತರ ಬಂದ ಜಮಾಲ್ ಸಾಹೇಬ್ ಬೈಕ್ ನಿಲ್ಲಿಸಿ ಲಿಫ್ಟ್ ಕೊಟ್ಟಿದ್ದಾರೆ. ಇದು ಪೂರ್ವಯೋಜಿತ ಯೋಜನೆಯಂತೆ ಜಮಾಲ್ ಸಾಹೇಬ್ ನನ್ನು ಕೊಲೆ ಮಾಡಲಾಗಿದೆಯೇ ಎಂಬ ಅನುಮಾನ ಹುಟ್ಟುಹಾಕಿದೆ.
ಅಥವಾ ಯಾರಾದರೂ ಸೈಕೋ ಆಗಿದ್ದು ಹೀಗೆ ಮಾಡಿದ್ದಾರಾ? ಪೊಲೀಸರು ಎಲ್ಲಾ ಸಂಭಾವ್ಯ ಕೋನಗಳಲ್ಲಿ ತನಿಖೆ ಮಾಡುತ್ತಿದ್ದಾರೆ. ಹುಚ್ಚು ನಾಯಿಗಳನ್ನು ಕೊಲ್ಲಲು ಬಳಸುವ ಮಾರಕ ರಾಸಾಯನಿಕವನ್ನು ಜಮಾಲ್ ಸಾಹೇಬ್‌ಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ.
ಇದನ್ನೂ ಓದಿ: ರಾತ್ರೋರಾತ್ರಿ ಮಾಯವಾಗ್ತಿದ್ದ ಮಹಿಳೆಯರ ಬಟ್ಟೆ, ಚಪ್ಪಲಿ: ಸಿಸಿಟಿವಿ ನೋಡಿ ಬೆಚ್ಚಿಬಿದ್ದ ಜನ್ರು!