ಗುವಾಹಟಿ: ಪಿಎಫ್‌ಐ ಸಂಘಟನೆಯ ವಿರುದ್ಧ ಅಸ್ಸೋಂ ಪೊಲೀಸರ ಕಾರ್ಯಾಚರಣೆ ರಾಜ್ಯದೊಳಗೆ ಮತ್ತು ಹೊರಗೆ ಜಾರಿಯಲ್ಲಿದೆ. ಕಳೆದ ರಾತ್ರಿಯಿಂದ ಪಿಎಫ್‌ಐ ಮುಖಂಡರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಸದ್ಯ ರಾಜ್ಯಾದ್ಯಂತ ಪೊಲೀಸರು 8 ಜನ ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ರಾಜ್ಯದ ಇತರ ಭಾಗಗಳಲ್ಲಿ ಹಾಗೂ ಬರ್ಪೇಟಾ ಜಿಲ್ಲೆಯ ನಗರ್‌ಬೆರಾ ಮತ್ತು ದಕ್ಷಿಣ ಬಾರ್ಪೇಟಾ ಪ್ರದೇಶಗಳಲ್ಲಿ ಪಿಎಫ್‌ಐ ವಿರುದ್ಧ ದಾಳಿಗಳನ್ನು ನಡೆಸಲಾಗಿದೆ. ರಾತ್ರಿ 3 ಗಂಟೆಯಿಂದ ಉನ್ನತ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಬಾರ್ಪೇಟಾ ಜಿಲ್ಲೆಯಲ್ಲಿ 7 ಜನರನ್ನು ಬಂಧಿಸಲಾಗಿದೆ. ಖುರ್ಶೆದ್ ಆಲಂ, ಶಾಹಿದುಲ್ ಇಸ್ಲಾಂ, ರುಹುಲ್ ಅಮೀನ್, ಸದಾಗರ್ ಅಲಿ, ಸಲೇಮಾ ಯಸ್ಮಿತಾ, ರಫೀಕುಲ್ ಇಸ್ಲಾಂ ಮತ್ತು ಆಸಿಕ್ ಇಕ್ಬಾಲ್ ಬಂಧಿತರು. ಕೆಲವು ದಿನಗಳ ಹಿಂದೆ ಗೋಲ್‌ಪಾರಾ ಜಿಲ್ಲೆಯಲ್ಲಿ ನಡೆದ ಪಿಎಫ್‌ಐ ಪ್ರತಿಭಟನೆಯಲ್ಲಿ ಇವರು ಪಾಲ್ಗೊಂಡಿದ್ದರು ಎನ್ನಲಾಗ್ತಿದೆ.
ಅದೇ ರೀತಿ ಪಿಎಫ್‌ಐನ ದರ್ರಾಂಗ್ ಜಿಲ್ಲಾಧ್ಯಕ್ಷ ಅನಿಸ್ ಅಹ್ಮದ್ ಅವರನ್ನು ದರ್ರಾಂಗ್ ಜಿಲ್ಲೆಯ ದಲ್ಗಾಂವ್‌ನಲ್ಲಿ ಬಂಧಿಸಲಾಗಿದೆ. ಈ ವ್ಯಕ್ತಿ ಅಸ್ಸಾಂ ಇಮಾಮ್ಸ್ ಅಸೋಸಿಯೇಶನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಮಿಯತ್ ಉಲೇಮಾ ಹಿಂದ್‌ನ ಅಖಿಲ ಭಾರತ ಕಾರ್ಯಕಾರಿ ಸದಸ್ಯನಾಗಿದ್ದಾನೆ. ಈತ 2015-16 ರಿಂದ ಪಿಎಫ್‌ಐನ ದರ್ರಾಂಗ್ ಜಿಲ್ಲಾ ಅಧ್ಯಕ್ಷನಾಗಿದ್ದಾರೆ.
ಇದಲ್ಲದೆ, ರಾಜ್ಯದ ಗೋಲ್ಪಾರಾ ಜಿಲ್ಲೆಯಲ್ಲಿ ಪೊಲೀಸರು 10 ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ.