ಹೊಸಪೇಟೆ: ತಾಲೂಕಿನ ಟಿಬಿ ಡ್ಯಾಂ ಬಳಿ ನಡೆದ ಬರ್ಬರ ಕೊಲೆ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಟಿಬಿ ಡ್ಯಾಂ ನಿವಾಸಿ ಮೈಕಲ್ ಜಾನ್ ಎಂಬಾತನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದು ಕುಟುಂಬಸ್ಥರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಕೊಲೆಯಾದ ಮೈಕಲ್ ಜಾನ್ ಈ ಹಿಂದೆ ಕೇಬಲ್ ಅಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಎಲೆಕ್ಟ್ರಿಷನ್ ಹಾಗೂ ಕಲಾವಿದನಾಗಿ ಕೆಲಸ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದರು. ಆದರೆ, ಮಾ. 20ರಂದು ರಾತ್ರಿ ವೇಳೆ ಕೊಲೆಯಾಗುವ ಮೂಲಕ ಜೀವನದ ಅಂತಿಮ ಯಾತ್ರೆ ಮುಗಿಸಿದ್ದಾರೆ.
ಮರಳಿ ಬರಲಿಲ್ಲ ಮನೆಗೆ:
ಮೈಕಲ್ ಜಾನ್ ಮಾ. 20ರಂದು ರಾತ್ರಿ 9.30ಕ್ಕೆ ಮನೆಗೆ ಬಂದು ಹೋಗಿದ್ದಾರೆ. ಬಳಿಕ ಮನೆಯವರು ಜಾನ್ ಮನೆಗೆ ಬಂದಿಲ್ಲ ಎಂದು ದೂರವಾಣಿ ಮೂಲಕ ಕುಟುಂಬಸ್ಥರನ್ನು ಸಂಪರ್ಕಿಸಿದ್ದಾರೆ. ಆಗ ಮೊಬೈಲ್ ಸ್ವೀಚ್ ಆಫ್ ಆಗಿದೆ. ಜಾನ್ ಕೆಲವೊಂದು ಸಲ ಮನೆಗೆ ತಡವಾಗಿ ಬರುವುದುಂಟು. ಹಾಗಾಗಿ ಕುಟುಂಬಸ್ಥರು ಸುಮ್ಮನಾಗಿದ್ದಾರೆ. ಬೆಳಗ್ಗೆ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.
ಕಲ್ಲಿನಿಂದ ಜಜ್ಜಿ ಬರ್ಬರ ಕೊಲೆ:
ಎರಡು ಕಲ್ಲಿನಿಂದ ಜಾನ್ನನ್ನು ಜಜ್ಜಿ ಕೊಲೆ ಮಾಡಲಾಗಿದೆ. ಅಂಗಿಯಿಂದ ಎರಡೂ ಕೈ ಕಟ್ಟಿ ದುಷ್ಕೃತ್ಯ ನಡೆಸಲಾಗಿದೆ. ಸತ್ತ ಸ್ಥಳದಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಬೆರಳಚ್ಚು ಹಾಗೂ ಶ್ವಾನದಳ ಬಂದು ಪರಿಶೀಲನೆ ನಡೆಸಲಾಗಿದೆ.
ಅಟ್ಟಾಡಿಸಿಕೊಂಡು ಕೊಲೆ ಮಾಡಿರುವ ಶಂಕೆ:
ಜಾನ್ ಮೃತದೇಹ ಒಂದು ಕಡೆ ಬಿದ್ದಿದ್ದು, ಬಳಸಿದ್ದ ಶೂ ಮತ್ತೊಂದು ದಿಕ್ಕಿಗೆ ಬಿದ್ದಿದೆ. ಜಾನ್ ಸ್ಕೂಟಿ ಮತ್ತೊಂದು ಕಡೆ ನಿಲ್ಲಿಸಲಾಗಿದೆ. ಇದರಿಂದ ವ್ಯಕ್ತಿಯನ್ನು ಅಟ್ಟಾಡಿಸಿಕೊಂಡು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕುಡುಕರ ಅಡ್ಡ:
ಕೊಲೆಯಾದ ಸ್ಥಳ ಕುಡುಕರ ಅಡ್ಡವಾಗಿದ್ದು, ಜನರು ರಾತ್ರಿಯಾದರೆ ಇತ್ತ ಸುಳಿಯುವುದಿಲ್ಲ. ಕುಡುಕರ ತಾಣವಾಗಿದ್ದರಿಂದ ಈ ಹಿಂದೆ ಪೊಲೀಸರು ದಾಳಿ ನಡೆಸಿ ಬಿಸಿ ಮುಟ್ಟಿಸಿದ ಉದಾಹರಣೆಗಳಿವೆ. ಆದರೂ ಸಹ ಅದೇ ಸ್ಥಳದಲ್ಲಿ ಕೊಲೆಯಾಗಿರುವುದು ಪೊಲೀಸರಿಗೆ ನಂಬಲು ಸಾಧ್ಯವಾಗುತ್ತಿಲ್ಲ.
ಸರಣಿ ಕೊಲೆಗಳು:
ಹೊಸಪೇಟೆಯಲ್ಲಿ ನಾಲ್ಕು ತಿಂಗಳಿನಲ್ಲಿ ನಾಲ್ಕು ಕೊಲೆಗಳು ನಡೆದಿದ್ದು, ಜನರಲ್ಲಿ ಭಯ ಹುಟ್ಟಿಸುವಂತಾಗಿದೆ. ತಾಲೂಕಿನ ನಾಗೇನಹಳ್ಳಿ ಬಳಿ ಮಹಿಳೆ ಕೊಲೆ, ನಗರದ ಲಾರಿ ಚಾಲಕನ ಕೊಲೆ, ಕೋರ್ಟ್ ಆವರಣರದಲ್ಲಿ ವಕೀಲನ ಕೊಲೆ ಹಾಗೂ ಈಗ ಟಿಬಿ ಡ್ಯಾಂನಲ್ಲಿ ಕೊಲೆಯಾಗಿರುವುದು. ಕೋರ್ಟ್ ಆವರಣದಲ್ಲಿ ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ, ಎರಡು ಕೊಲೆ ಮಾಡಿದ ಆರೋಪಿಗಳನ್ನು ಇಲ್ಲಿವರೆಗೂ ಬಂಧಿಸಿಲ್ಲ. ಈಗ ಮತ್ತೊಂದು ಕೊಲೆಯಾಗಿದೆ. ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ, ಶಿಕ್ಷೆಗೆ ಒಳಪಡಿಸಿದರೆ ಅಪರಾಧ ಪ್ರಕರಣಗಳು ತಗ್ಗುತ್ತವೆ. ಅಲ್ಲದೆ ಭಯದ ವಾತಾವರಣವನ್ನು ಹೋಗಲಾಡಿಸಬಹುದು ಎಂಬುದು ಜನರ ಅಭಿಪ್ರಾಯವಾಗಿದೆ.