ನವದೆಹಲಿ: ಯುವ ಕುಸ್ತಿಪಟು ಸಾಗರ್ ರಾಣಾ ಕೊಲೆ ಪ್ರಕರಣದ ಸಾಕ್ಷಿಗಳಿಗೆ ಪೊಲೀಸ್ ರಕ್ಷಣೆ ನೀಡುವಂತೆ ದೆಹಲಿಯ ರೋಹಿಣಿ ನ್ಯಾಯಾಲಯದ ಸಾಕ್ಷಿ ಸಂರಕ್ಷಣಾ ಸಮಿತಿ ಆದೇಶಿಸಿದೆ.
ಹರಿಯಾಣ ಹಾಗೂ ದೆಹಲಿಯಲ್ಲಿ ನೆಲೆಸಿರುವ ಸಾಕ್ಷಿಗಳ ಮೇಲೆ ಬೆದರಿಕೆ ಹೆಚ್ಚಾಗಿದ್ದು, ಜೀವಕ್ಕೆ ಅಪಾಯವಿದೆ ಎಂದು ಗಮನಿಸಿದ ನಂತರ ಅವರಿಗೆ ಸಾಕಷ್ಟು ಭದ್ರತೆ ನೀಡಲು ಸಮಿತಿ ನಿರ್ಧರಿಸಿದೆ. ಹೀಗಾಗಿ ಸಾಕ್ಷಿಗಳಿಗೆ ಪೊಲೀಸ್ ರಕ್ಷಣೆ ನೀಡುವಂತೆ ಎರಡೂ ರಾಜ್ಯಗಳ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಸಾಕ್ಷಿಗಳ ಪರ ವಕೀಲ ಅಜಯ್ ಪಿಪಾನಿಯಾ ತಿಳಿಸಿದ್ದಾರೆ.
ಇದನ್ನೂ ಓದಿ: ಸಾಗರ್ ಧಂಕರ್ ಹತ್ಯೆ ಕೇಸ್: ಸುಶೀಲ್ ಕುಮಾರ್& ಸಹಚರನಿಗೆ 14 ದಿನ ನ್ಯಾಯಾಂಗ ಬಂಧನ
ಇತ್ತೀಚೆಗಷ್ಟೇ ಪ್ರಕರಣದ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಸಾಕ್ಷಿಗಳ ರಕ್ಷಣೆ ಸಲುವಾಗಿ 2018ರ ವಿಟ್ನೆಟ್ ಪ್ರೊಟೆಕ್ಷನ್ ಸ್ಕೀಮ್ ಅಡಿಯಲ್ಲಿ ಒಂದು ವಾರದೊಳಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಇದರಂತೆ ರೋಹಿಣಿ ಜಿಲ್ಲಾ ನ್ಯಾಯಧೀಶರನ್ನೊಳಗೊಂಡ ಸಾಕ್ಷಿ ಸಂರಕ್ಷಣಾ ಸಮಿತಿಯನ್ನು ರಚಿಸಲಾಗಿತ್ತು.
ಪ್ರಕರಣ ಹಿನ್ನೆಲೆ
ಮೇ 4 ರಂದು ದೆಹಲಿಯ ಛತ್ರಸಾಲ ಸ್ಟೇಡಿಯಂನಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಕುಸ್ತಿಪಟು ಸಾಗರ್ ರಾಣಾ ಧಂಕರ್ ಹಲ್ಲೆಗೊಳಗಾಗಿ ಮೃತಪಟ್ಟಿದ್ದರು. ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬರುತ್ತಿದ್ದಂತೆಯೇ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಪರಾರಿಯಾಗಿದ್ದರು. ಬಳಿಕ ಇವರನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದರು.
ದೆಹಲಿ ನ್ಯಾಯಾಲಯವು ಸುಶೀಲ್ ಕುಮಾರ್, ಇವರ ಸ್ನೇಹಿತ ಅಜಯ್ ಕುಮಾರ್ ಸೇರಿದಂತೆ ಆರು ಮಂದಿ ಆರೋಪಿಗಳಿಗೆ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿತ್ತು. ಜೂನ್ 2ರಂದು ರೋಹಿಣಿ ಕೋರ್ಟ್ ಸುಶೀಲ್ ಮತ್ತು ಅಜಯ್ ರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಿದೆ.