ಮಂಗಳೂರು: ಯುವತಿ ವಿಚಾರಕ್ಕಾಗಿ ಮನೆಗೆ ನುಗ್ಗಿ ದಾಂಧಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಏಳು ಮಂದಿ ರೌಡಿಶೀಟರ್ಗಳನ್ನು ಬಂಧಿಸಿದ್ದಾರೆ.
ನಗರದ ಕೋಡಿಕಲ್ ನಿವಾಸಿ ರಂಜಿತ್ (28), ಉರ್ವಸ್ಟೋರ್ ಸುಂಕದಕಟ್ಟೆ ನಿವಾಸಿಗಳಾದ ಅವಿನಾಶ್ (23), ಧನುಷ್(19), ಕೊಟ್ಟಾರ ಚೌಕಿ ಲೋಬೊರೋಡ್ ನಿವಾಸಿ ಪ್ರಜ್ವಲ್(24), ಕೋಡಿ ಬೆಂಗ್ರೆ ನಿವಾಸಿ ದೀಕ್ಷಿತ್(21), ಬಂಟ್ವಾಳ ತಾಲೂಕು ಬಾರೆಕಾಡು ನಿವಾಸಿ ಹೇಮಂತ್ (19), ಕುಂಜತ್ ಬೈಲ್ ನಿವಾಸಿ ಯತಿರಾಜ್(23) ಬಂಧಿತ ಆರೋಪಿಗಳು.
ಆರೋಪಿಗಳಲ್ಲಿ ಹೇಮಂತ್ ಎಂಬಾತ ನಗರದ ಶಕ್ತಿನಗರದ ಪ್ರೀತಿನಗರದ ನಿವಾಸಿ ಯುವತಿಯೋರ್ವಳಿಗೆ ಪ್ರೀತಿ ಮಾಡಬೇಕೆಂದು ತೊಂದರೆ ಕೊಡುತ್ತಿದ್ದ. ಈ ಬಗ್ಗೆ ಆಕೆಯ ಅಣ್ಣಂದಿರು ತೊಂದರೆ ಕೊಡುವ ಬಗ್ಗೆ ವಿಚಾರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೇಮಂತ್ ತನ್ನ ಆರು ಮಂದಿ ಸಹಚರರನ್ನು ಸೇರಿಸಿಕೊಂಡು ಮೇ 30ರಂದು ರಾತ್ರಿ 8ರ ಸುಮಾರಿಗೆ ಯುವತಿಯ ಮನೆಗೆ ತೆರಳಿ ದಾಂಧಲೆ ನಡೆಸಿದ್ದಾರೆ.
ಅಲ್ಲದೆ ತಾನು ಯುವತಿಯನ್ನು ಪ್ರೀತಿಸುತ್ತಿದ್ದು, ತನಗೆ ಆಕೆಯನ್ನು ಮದುವೆ ಮಾಡಿಕೊಡಬೇಕು ಎಂದು ರಾದ್ಧಾಂತ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಜೊತೆಗೆ ಮನೆಯಲ್ಲಿದ್ದ ಟಿವಿ, ಮಿಕ್ಸಿ, ಸೋಫಾ, ಮನೆಯ ಹಿಂಭಾಗದ ಬಾಗಿಲನ್ನು ರಾಡ್ನಿಂದ ಒಡೆದು ಹಾಕಿದ್ದಾರೆ. ಅಲ್ಲದೆ ಯುವತಿಯ ತಾಯಿಯನ್ನ ಕೊಲೆ ಮಾಡುವ ಉದ್ದೇಶದಿಂದ ತಲವಾರನ್ನು ಬೀಸಿದ್ದು, ಅವರು ತಪ್ಪಿಸಿಕೊಂಡು ಮನೆಯ ಹೊರಗೆ ಓಡಿಹೋಗಿ ಬೊಬ್ಬೆ ಹಾಕಿದ್ದಾರೆ. ಈ ಸಂದರ್ಭ ಅಕ್ಕಪಕ್ಕದವರು ಬಂದು ಸೇರಿದಾಗ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ ಅವರಲ್ಲಿದ್ದ ಮಾರಕಾಸ್ತ್ರ ಹಾಗೂ ಕೃತ್ಯಕ್ಕೆ ಬಳಸಿರುವ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಶಶಿಕುಮಾರ್ ಮಾಹಿತಿ ನೀಡಿದರು.