ಮಂಡ್ಯ: ಮದ್ದೂರು ತಾಲ್ಲೂಕಿನ ದೊಡ್ಡರಸಿನಕೆರೆ ಗ್ರಾಮದ ರೌಡಿ ಶೀಟರ್ ಅರುಣ್ ಅಲಿಯಾಸ್ ಕಪ್ಪೆ ಹಾಗೂ ಅದೇ ಗ್ರಾಮದ ರೌಡಿ ಶೀಟರ್ಗಳಾದ ದೊಡ್ಡಯ್ಯ ಮತ್ತು ದೇವರಾಜು ಅವರ ನಡುವೆ ಭಾನುವಾರ ಸಂಜೆ ಹಣಕಾಸಿನ ವಿಚಾರಕ್ಕಾಗಿ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
ಹೊಡೆದಾಟದಲ್ಲಿ ಅರುಣ್ ಅಲಿಯಾಸ್ ಕಪ್ಪೆಗೆ ದೇವರಾಜು ಮತ್ತು ದೊಡ್ಡಯ್ಯ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಅರುಣ್ ಮೂಗಿನಲ್ಲಿ ತೀವ್ರವಾಗಿ ರಕ್ತಸ್ರಾವವಾಗಿದ್ದು, ಕೂಡಲೇ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಹಿಂಬಾಲಿಸಿ ಬಂದ ದೊಡ್ಡಯ್ಯ ಮತ್ತವನ ಸಹಚರರು, ಎತ್ತಿನ ಗಾಡಿ ಗೂಟದಿಂದ ಮತ್ತೆ ಅರುಣ್ ಮೇಲೆ ತೀಕ್ಷ್ಣವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಚಿಕಿತ್ಸೆ ಫಲಕಾರಿಯಾಗದೆ ಸಾವು: ಗಂಭೀರವಾಗಿ ಗಾಯಗೊಂಡಿದ್ದ ಅರುಣ್ ಕೆ.ಎಂ. ದೊಡ್ಡಿಯ ಜಿ.ಮಾದೇಗೌಡ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಅರುಣ್ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಒಪ್ಪಿಸಲಾಗಿದೆ.
ಅರುಣ್ನನ್ನು ತೀವ್ರವಾಗಿ ಥಳಿಸಿ ಹತ್ಯೆಮಾಡಿದ ರೌಡಿಶೀಟರ್ಗಳಾದ ದೊಡ್ಡಯ್ಯ ಮತ್ತು ದೇವರಾಜು ಹಾಗೂ ಮತ್ತವರ ಸಹಚರರು ಸೇರಿ ಒಟ್ಟು 5 ಮಂದಿಯ ಮೇಲೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಅರುಣ್ ಕೊಲೆ ಹಿನ್ನೆಲೆಯಲ್ಲಿ ದೊಡ್ಡರಸಿನಕೆರೆ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಗ್ರಾಮದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಎಷ್ಟು ದುಡಿದರೂ ದುಡ್ಡು ದುಡ್ಡು ಅಂತಾಳೆ.. ಪತ್ನಿಯ ಧನದಾಹಕ್ಕೆ ಬೇಸತ್ತು ಗಂಡ ಆತ್ಮಹತ್ಯೆ