ಬೆಳ್ತಂಗಡಿ: ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ ಖಾಸಗಿ ವ್ಯಕ್ತಿಗಳಿಂದ ಕೈ ಸಾಲ ಪಡೆದು ಆ ಸಾಲವನ್ನು ತೀರಿಸಲಾಗದೆ ಮನನೊಂದು ಹಾಸನ ಜಿಲ್ಲೆ ಬೇಲೂರು ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಕಕ್ಕಿಂಜೆ ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. 36 ವರ್ಷದ ಕುಮಾರ್ ಎಂ.ಎಸ್ ಮೃತ ದುರ್ದೈವಿ.
ಕಳೆದ ಮಂಗಳವಾರ ಮನೆಯಿಂದ ತನ್ನ ದ್ವಿಚಕ್ರ ವಾಹನದಲ್ಲಿ ಮನೆ ಬಿಟ್ಟು ಹೋಗಿದ್ದ ಕುಮಾರ್ ನಿನ್ನೆ ಸುಮಾರು 8 ಗಂಟೆಗೆ ತನ್ನ ಪತ್ನಿಗೆ ಧರ್ಮಸ್ಥಳದಿಂದ 10 ಕಿ.ಮೀ ದೂರ ಇರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಅನುಮಾನಗೊಂಡು ಅವರ ಪತ್ನಿ ಮತ್ತು ಸ್ನೇಹಿತರು ಧರ್ಮಸ್ಥಳದ ಕಡೆ ಹುಡುಕಾಡುತ್ತ ಬಂದಾಗ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಕಕ್ಕಿಂಜೆ ವಸತಿ ಗೃಹದ ಮುಂದೆ ಕುಮಾರ್ ಅವರು ತೆಗೆದುಕೊಂಡು ಬಂದಿದ್ದ ದ್ವಿಚಕ್ರ ವಾಹನ ಪತ್ತೆಯಾಗಿದೆ. ವಸತಿ ಗೃಹ ಸಿಬ್ಬಂದಿಯನ್ನು ವಿಚಾರಿಸಿದಾಗ ಕುಮಾರ್ ಕೊಠಡಿ ಪಡೆದುಕೊಂಡ ಬಗ್ಗೆ ಮಾಹಿತಿ ಸಿಕ್ಕಿದೆ.
ವಸತಿ ಗೃಹದ ಮೇಲ್ವಿಚಾರಕರೊಂದಿಗೆ ಹೋಗಿ ನೋಡಿದಾಗ ಕುಮಾರ್ ಪಡೆದುಕೊಂಡ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಇವರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇದೆ. ಆತ್ಮಹತ್ಯೆ ಘಟನೆ ಸಂಬಂಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.