ಮೊಹಾಲಿ (ಪಂಜಾಬ್) : ಪಂಜಾಬಿ ಗಾಯಕ ಅಲ್ಫಾಜ್ ಉರ್ಫ್ ಅಮನ್ ಜೋತ್ ಸಿಂಗ್ ಪನ್ವಾರ್ ಅವರು ಅಪಘಾತದಲ್ಲಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮೊಹಾಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ಇಲ್ಲಿನ ಸ್ಥಳೀಯ ಧಾಬಾವೊಂದರಲ್ಲಿ ವಾಹನ ಡಿಕ್ಕಿ ಹೊಡೆದಿದ್ದರಿಂದ ಅವರು ಗಾಯಗೊಂಡಿದ್ದರು. ಅಲ್ಪಾಜ್ ಅವರು ಸದ್ಯ ಅಪಾಯದಿಂದ ಪಾರಾಗಿದ್ದಾರೆ ಎಂದು ಅವರ ಆಪ್ತ ಗಾಯಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
ಯಾರ್ ಬತೇರೆ ಹಾಡಿನಿಂದ ಖ್ಯಾತರಾದ ಅಲ್ಫಾಜ್ ಸ್ಥಳೀಯ ಪಲ್ ಧಾಬಾದಿಂದ ತಮ್ಮ ಮೂವರು ಗೆಳೆಯರೊಂದಿಗೆ ಹೊರಟಿದ್ದರು. ಈ ಸಮಯದಲ್ಲಿ ಧಾಬಾದ ಮಾಜಿ ನೌಕರ ವಿಕ್ಕಿ ಎಂಬುರೊಂದಿಗೆ ಯಾವುದೋ ವಿಷಯಕ್ಕೆ ವಾಗ್ವಾದ ಆರಂಭವಾಗಿದೆ. ಧಾಬಾ ಮಾಲೀಕ ತನಗೆ ನೀಡಬೇಕಾಗಿರುವ ಬಾಕಿ ಹಣವನ್ನು ಕೊಡಿಸುವಂತೆ ಮಧ್ಯಸ್ಥಿಕೆ ವಹಿಸಬೇಕೆಂದು ಅಲ್ಪಾಜ್ನಿಗೆ ವಿಕ್ಕಿ ಕೇಳಿಕೊಂಡಿದ್ದಾರೆ. ಆದರೆ ಅಲ್ಫಾಜ್ ಇದಕ್ಕೆ ಒಪ್ಪದಿದ್ದಾಗ ವಿಕ್ಕಿ ಧಾಬಾ ಮಾಲೀಕನ ಟೆಂಪೊ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಟೆಂಪೊ ರಿವರ್ಸ್ ತೆಗೆಯುವಾಗ ಅಲ್ಫಾಜ್ಗೆ ಡಿಕ್ಕಿ ಹೊಡೆದಿದೆ.
ಅಪಘಾತದಿಂದ ಅಲ್ಫಾಜ್ಗೆ ತಲೆ, ಭುಜ ಮತ್ತು ಕಾಲುಗಳಿಗೆ ಗಾಯಗಳಾಗಿವೆ. ಜೊತೆಗಿದ್ದ ಗೆಳೆಯರು ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ. ಆರೋಪಿ ಈ ಸಮಯದಲ್ಲಿ ಸ್ಥಳದಿಂದ ಪರಾರಿಯಾದರೂ ನಂತರ ಮೊಹಾಲಿ ಪೊಲೀಸರಿ ಆತನನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಸೋಹ್ನಾ ಪೊಲೀಸ್ ಸ್ಟೇಷನ್ನಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪಂಜಾಬಿ ಗಾಯಕ ಅಲ್ಪಾಜ್, ಪುಟ್ ಜಟ್ ದಾ, ರಿಕ್ಷಾ, ಗಡ್ಡಿ ಮುಂತಾದ ಹಾಡುಗಳಿಂದ ಖ್ಯಾತರಾಗಿದ್ದಾರೆ. ಹಾಯೆ ಮೇರಾ ದಿಲ್, ಬೇಬೊ, ಬರ್ತಡೇ ಬ್ಯಾಷ್ ಮತ್ತು ಯಾರ್ ಬತೇರೆ ಮುಂತಾದ ಹಾಡುಗಳನ್ನು ಯೋಯೋ ಹನಿ ಸಿಂಗ್ ಜೊತೆಗೆ ಅಲ್ಫಾಜ್ ಹಾಡಿದ್ದಾರೆ.
ಇದನ್ನೂ ಓದಿ: ಪತ್ನಿ ಶಾಲಿನಿಗೆ ಹನಿ ಸಿಂಗ್ ವಿಚ್ಛೇದನ: 1 ಕೋಟಿ ರೂ. ಜೀವನಾಂಶದ ಚೆಕ್ ಹಸ್ತಾಂತರ