ಅಲಿಗಢ: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ನಡೆಯುತ್ತಿರುವ ಸಾರ್ವಜನಿಕ ಕಾಮಗಾರಿ ಯೋಜನೆಗಳ ಗುಣಮಟ್ಟವನ್ನು ಪ್ರಶ್ನಿಸಿದ್ದಕ್ಕಾಗಿ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಕಾರ್ಯಕರ್ತನೊಬ್ಬನನ್ನು ಗ್ರಾಮದ ಮುಖ್ಯಸ್ಥ ಮತ್ತು ಆತನ ಮಗ ಸೇರಿದಂತೆ ಎಂಟು ಜನ ಹೊಡೆದು ಕೊಂದಿದ್ದಾರೆ. ಘಟನೆಯಲ್ಲಿ ಮೃತನ ಸಹೋದರ ತೀವ್ರವಾಗಿ ಗಾಯಗೊಂಡಿದ್ದಾನೆ.
ಇಗ್ಲಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಗೊರೈ ಗ್ರಾಮದ ನಿವಾಸಿ ದೇವಜೀತ್ ಸಿಂಗ್ (32) ಮತ್ತು ಆತನ ಸಹೋದರ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಅವರನ್ನು ಹೊಡೆದು ಕೊಲ್ಲಲಾಗಿದೆ ಎಂದು ಮೃತನ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಉಪ ಪೊಲೀಸ್ ಅಧೀಕ್ಷಕ ರಾಘವೇಂದ್ರ ಸಿಂಗ್, ಗ್ರಾಮದ ಪ್ರಧಾನ್ ದೇವೇಂದ್ರ ಸಿಂಗ್, ಆತನ ಮಗ ಕಾರ್ತಿಕ್ ಮತ್ತು ಇತರ ಆರು ಮಂದಿಯ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ 302 (ಕೊಲೆ), 147 (ಗಲಭೆ), 506 (ಕ್ರಿಮಿನಲ್ ಬೆದರಿಕೆ) ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಗ್ರಾಮದ ಮುಖ್ಯಸ್ಥ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಮಾಹಿತಿ ಕೋರಿ ನನ್ನ ಮಗ ಎರಡು ತಿಂಗಳ ಹಿಂದೆ ಆರ್‌ಟಿಐ ಅರ್ಜಿ ಸಲ್ಲಿಸಿದ್ದ. ಗ್ರಾಮದಲ್ಲಿ ನಡೆದ ನಿರ್ಮಾಣ ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ವಿವಿಧ ಅಧಿಕಾರಿಗಳಿಗೆ ಹಲವಾರು ದೂರು ಸಲ್ಲಿಸಿದ್ದ. ಆಗಿನಿಂದಲೇ ನಮಗೆ ಕೊಲೆ ಬೆದರಿಕೆಗಳು ಬರಲಾರಂಭಿಸಿದ್ದವು. ಕಳೆದ ತಿಂಗಳು ದೇವೇಂದ್ರ ವಿರುದ್ಧ ದೂರು ನೀಡಲು ಪೊಲೀಸರ ಬಳಿ ಹೋದರೂ ಅವರು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಲಿಲ್ಲ ಎಂದು ಕೊಲೆಯಾದ ದೇವಜೀತ್ ತಂದೆ ಮಹೇಂದ್ರ ಸಿಂಗ್ ಹೇಳಿದರು.
ಗ್ರಾಮದ ಪ್ರಧಾನ್ ಮತ್ತು ಆತನ ಸಂಬಂಧಿಕರು ನನ್ನ ಸೋದರಳಿಯನ ಮೇಲೆ ಲಾಠಿ ಮತ್ತು ಹರಿತವಾದ ಆಯುಧಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ಬಗ್ಗೆ ತಿಳಿದು ನಾವು ಸ್ಥಳಕ್ಕೆ ಧಾವಿಸಿದೆವು. ದೇವಜೀತ್ ತಲೆಗೆ ಗಂಭೀರ ಗಾಯಗಳಾಗಿದ್ದು, ಆತ ಸಾವನ್ನಪ್ಪಿದ್ದಾನೆ. ಆತನ ಕಿರಿಯ ಸಹೋದರ ಸುರೇಂದ್ರ ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಕೊಲೆಯಾದ ದೇವಜೀತ್ ಚಿಕ್ಕಪ್ಪ ರಾಮ್‌ವೀರ್ ಸಿಂಗ್ ಹೇಳಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಬಟ್ಟೆ ಒಣಗಿಸುವ ಜಾಗಕ್ಕೆ ಗಲಾಟೆ, ಕೊಲೆಯಲ್ಲಿ ಅಂತ್ಯ