ಬೆಳಗಾವಿ: ಪೆಟ್ರೋಲ್ ಕಳ್ಳತನ ಮಾಡುತ್ತಿರುವುದನ್ನು ನೋಡಿದ್ದ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿ ತಿಪ್ಪೆಗುಂಡಿಯಲ್ಲಿ ಹೂತಿಟ್ಟ ಭಯಾನಕ ಘಟನೆ ಜಿಲ್ಲೆಯ ಗೋಕಾಕ್ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಬಳೋಬಾಳ ಗ್ರಾಮದ ನಿವಾಸಿ ಮಹಾದೇವ ಕಿಚಡಿ(28) ಕೊಲೆಯಾದ ಯುವಕ.
ಅದೇ ಗ್ರಾಮದ ನಿವಾಸಿ, ಪೆಟ್ರೋಲ್ ಕಳ್ಳತನ ಮಾಡುತ್ತಿದ್ದ ಪ್ರವೀಣ ಸುಣಧೋಳಿ ಕೊಲೆ ಆರೋಪಿಯಾಗಿದ್ದು, ಘಟಪ್ರಭಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಪ್ರವೀಣ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಹಿನ್ನೆಲೆ: ಗೋಕಾಕ್ನ ಬಳೋಬಾಳ ಗ್ರಾಮದ ನಿವಾಸಿಯಾಗಿರುವ ಕೊಲೆ ಆರೋಪಿ ಪ್ರವೀಣ ಸುಣದೋಳಿ ಕೆಲವು ದಿನಗಳ ಹಿಂದೆ ರಸ್ತೆ ಬದಿಯೊಂದರಲ್ಲಿ ನಿಲ್ಲಿಸಿದ್ದ ವಾಹನದಲ್ಲಿದ್ದ ಪೆಟ್ರೋಲ್ ಕಳ್ಳತನ ಮಾಡಲು ಮುಂದಾಗಿದ್ದಾನೆ. ಇದನ್ನು ಕೊಲೆಯಾದ ಮಹಾದೇವ ನೋಡಿದ್ದಾನೆ.

ಇದರಿಂದ ಆತಂಕಕ್ಕೆ ಒಳಗಾದ ಕೊಲೆ ಆರೋಪಿ ಪ್ರವೀಣ ತಾನು ಕಳ್ಳತನ ಮಾಡುತ್ತಿರುವ ವಿಷಯ ಗ್ರಾಮದ ಜನರಿಗೆಲ್ಲಾ ಗೊತ್ತಾಗಿ ಊರು ಜನರ ಮುಂದೆ ತನ್ನ ಮಾನ ಮರ್ಯಾದೆ ಹೋಗುತ್ತದೆ ಎಂಬ ಭಯಕ್ಕೆ ಅಲ್ಲಿಯೇ ಇದ್ದ ಕಬ್ಬಿಣದ ರಾಡ್‌ನಿಂದ ಮಹಾದೇವನಿಗೆ ಹೊಡೆದು ಕೊಲೆ ಮಾಡಿದ್ದಾನೆ.
ಬಳಿಕ ಮೃತದೇಹವನ್ನು ತಿಪ್ಪೆಯೊಂದರಲ್ಲಿ ತೆಗ್ಗು ತೆಗೆದು ಮುಚ್ಚಿದ್ದಾನೆ. ಇದೀಗ ನಾಲ್ಕು ದಿನಗಳ ಬಳಿಕ ಶವ ಕೊಳೆತು ವಾಸನೆ ಬಂದಿದೆ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ತಿಪ್ಪೆಯಲ್ಲಿ ಅಗೆದು ನೋಡಿದಾಗ ಮೃತದೇಹ ಇರುವುದು ಬೆಳಕಿಗೆ ಬಂದಿದೆ. ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಆಗಮಿಸಿದ ಘಟಪ್ರಭಾ ಪೊಲೀಸರು ಪರಿಶೀಲನೆ ನಡೆಸಿ, ಒಂದೇ ದಿನದ ಅಂತರದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಸಹಾಯಕ ಆಯುಕ್ತೆ ಮೇಲೆ ವ್ಯಾಪಾರಿ ಅಟ್ಯಾಕ್.. ಮೂರು ಬೆರಳು ಕಟ್..