ಗುವಾಹಟಿ: ಅಸ್ಸಾಂನ ಪದ್ಮ ಪ್ರಶಸ್ತಿ ಪುರಸ್ಕೃತ ಗಣ್ಯ ವ್ಯಕ್ತಿಯೊಬ್ಬರ ವಿರುದ್ಧ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಈ ಪ್ರಕರಣ ಕೋರ್ಟ್ ತಲುಪುತ್ತಿದ್ದಂತೆ ಆರೋಪಿ ಬಂಧನದಿಂದ ಪಾರಾಗಲು ಗುವಾಹಟಿ ಹೈಕೋರ್ಟ್‌ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ರಜೆ ಕಾಲದ ಪೀಠದಲ್ಲಿದ್ದ ನ್ಯಾ.ಅರುಣ್ ದೇವ್ ಚೌಧರಿ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ. ಈ ಸಂಬಂಧ ಡಿಸೆಂಬರ್ 28 ರಂದು ಆದೇಶ ಹೊರಡಿಸಿರುವ ಕೋರ್ಟ್, ಪೋಕ್ಸೊ ಕಾಯ್ದೆಯಡಿ ಈ ಪ್ರಕರಣ ಬರುವುದರಿಂದ ಗಂಭೀರ ಸ್ವರೂಪದಲ್ಲಿದೆ. ಹೀಗಾಗಿ ಸಂಪೂರ್ಣ ಮಾಹಿತಿಯನ್ನು ಜನವರಿ 7ರೊಳಗೆ ನೀಡಬೇಕೆಂದು ಪೊಲೀಸರಿಗೆ ಸೂಚಿಸಿದೆ.
ಇನ್ನೊಂದೆಡೆ, ತಮ್ಮ ಮಾನಹಾನಿ ಮಾಡಲು ಎಫ್‌ಐಆರ್ ದಾಖಲಿಸಿದ್ದು, ದೂರಿನಲ್ಲಿ ಸಂತ್ರಸ್ತೆ ಯಾವುದೇ ನಿರ್ದಿಷ್ಟ ಹೇಳಿಕೆ ನೀಡಿಲ್ಲ ಎಂದು ಆರೋಪಿ ತಿಳಿಸಿದ್ದಾರೆ.
ಈ ಹಿಂದೆ, ಇಬ್ಬರು ಬಾಲಕಿಯರಿಗೆ ಆಶ್ರಯ ನೀಡುವಂತೆ ಆರೋಪಿಯನ್ನು ಕೋರಲಾಗಿತ್ತು. ಅದರಂತೆ ಪತ್ನಿಯ ಆಶ್ರಯದಲ್ಲಿ ಬಾಲಕಿಯರನ್ನು ತಮ್ಮ ಮನೆಯಲ್ಲೇ 2020ರ ಸೆಪ್ಟೆಂಬರ್‌ನಿಂದ ಪೋಷಿಸಲಾಗುತ್ತಿತ್ತು. ಈ ವೇಳೆ ಆರೋಪಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಕ್ಕಳ ಕಲ್ಯಾಣ ಸಮಿತಿ-ಸಿಡಬ್ಲ್ಯೂಸಿ ಆರೋಪಿಸಿದೆ.
ಇದನ್ನೂ ಓದಿ: ಅಲಿಗಢ ಧರ್ಮ ಸಂಸದ್ಗೂ ಮುನ್ನ ಅನ್ನಪೂರ್ಣ ಭಾರತಿಗೆ ಬೆದರಿಕೆ ಕರೆ, ಭದ್ರತೆಗೆ ಮನವಿ