ಬೆಂಗಳೂರು: ನಗರದಿಂದ ರೈಲುಗಳ ಮುಖಾಂತರ ಹೊರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರಿಗೆ ನಕಲಿ ಕೊರೊನಾ ನಗೆಟಿವ್ ವರದಿ ನೀಡಿ ಹಣ ಸಂಪಾದನೆ ಮಾಡುತ್ತಿದ್ದ ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಓದಿ: ಅತ್ಯಾಚಾರದ ವೇಳೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಎಸ್ಐ.. ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆ ಯತ್ನ
ಉಪ್ಪಾರಪೇಟೆ ನಿವಾಸಿ ಸಂಪತ್ಲಾಲ್ (35) ಬಂಧಿತ ಆರೋಪಿ. ಲಾಕ್ಡೌನ್ ಪರಿಣಾಮ ಹೊರ ರಾಜ್ಯಗಳಿಗೆ ರೈಲಿನ ಮುಖಾಂತರ ಹೊರಡುವ ಪ್ರಯಾಣಿಕರಿಗೆ ಈತ ಕೊರೊನಾ ನಗೆಟಿವ್ ವರದಿ ನೀಡುತ್ತಿದ್ದ. ಅಧಿಕೃತವಾಗಿ ಲ್ಯಾಬ್ಗಳಿಂದ ಟೆಸ್ಟ್ ಮಾಡಿಸದೆ ಡಯಾಗ್ನೋಸ್ಟಿಕ್ ಸೆಂಟರ್ ಹೆಸರಿನಲ್ಲಿ ಪ್ರಮಾಣಪತ್ರ ತಯಾರಿಸಿ, ವೈದ್ಯರ ಹೆಸರಿನಲ್ಲಿ ನಕಲಿ ಸೀಲ್ ಹಾಗೂ ಸಹಿ ಹಾಕಿಸಿಕೊಂಡು ಡೂಪ್ಲಿಕೇಟ್ ಸರ್ಟಿಫಿಕೇಟ್ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಲಾಕ್ಡೌನ್ ಮುನ್ನ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ಆರೋಪಿ ಫ್ಲೈಟ್ ಹಾಗೂ ರೈಲ್ವೇ ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದ. ಸದ್ಯ ಲಾಕ್ಡೌನ್ನಲ್ಲಿ ವಿಮಾನ ಹಾಗೂ ರೈಲು ಪ್ರಯಾಣಕ್ಕೆ ನಿರ್ಬಂಧ ವಿಧಿಸಿಲ್ಲ. ಆದರೆ ಪ್ರಯಾಣ ಬೆಳೆಸಬೇಕಾದರೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಇದನ್ನೇ ದುರ್ಬಳಕೆ ಮಾಡಿಕೊಂಡ ಆರೋಪಿ, ಹೆಚ್ಚಾಗಿ ರಾಜಸ್ತಾನ ಜಾಗೂ ಪಶ್ಚಿಮ ಬಂಗಾಳದ ರೈಲ್ವೆ ಪ್ರಯಾಣಿಕರಿಗೆ ನಕಲಿ ನಗೆಟಿವ್ ರಿಪೋರ್ಟ್ ಸಿದ್ದಪಡಿಸಿಕೊಡುತ್ತಿದ್ದ.
ಒಂದು ರಿಪೋರ್ಟ್ ನೀಡಲು 3 ರಿಂದ 4 ಸಾವಿರ ರೂಪಾಯಿ ವಸೂಲಿ ಮಾಡುತ್ತಿದ್ದ. ಸದ್ಯ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ನಕಲಿ ರಿಪೋರ್ಟ್ ಪಡೆದ ಆಯಾ ರಾಜ್ಯಗಳಿಗೆ ಮಾಹಿತಿ ನೀಡಲಾಗುತ್ತಿದೆ. ಬಂಧಿತನಿಂದ ಮೂರು ನಕಲಿ ಸರ್ಟಿಫಿಕೇಟ್ ಹಾಗೂ ಮೊಬೈಲ್ ಜಪ್ತಿ ಮಾಡಿ ತನಿಖೆ ಮುಂದುವರೆಸಿರುವುದಾಗಿ ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ ತಿಳಿಸಿದ್ದಾರೆ.