ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಸೈಬರ್ ಕಳ್ಳತನ ಕೇಸ್ಗಳು ಹೆಚ್ಚಾಗುತ್ತಿರುವುದು ಗೊತ್ತೇ ಇದೆ. ಎಷ್ಟೇ ಎಚ್ಚರಿಕೆ ವಹಿಸಿ ಹಣ ವರ್ಗಾವಣೆ ಮಾಡಿದ್ರೂ ಸಹ ನಮಗರಿವಿಲ್ಲದಂತೆ ನಾವು ಕಳ್ಳರ ಜಾಲದಲ್ಲಿ ಸಿಲುಕಿಕೊಂಡಿರುತ್ತೇವೆ. ನಮ್ಮ ಅವಸರಕ್ಕೆ ಸಹಾಯಕ್ಕಾಗುವ ಆನ್ಲೈನ್ ಮನಿ ಟ್ರಾಂಜಾಕ್ಷನ್ ಆ್ಯಪ್ಗಳೇ ನಮಗೆ ಮುಳ್ಳಾಗುತ್ತಿರುವುದು ಸುಳ್ಳಲ್ಲ. ಅದಕ್ಕೆ ಸರಿಯಾಗಿ ಸೈಬರ್ ಕಳ್ಳರು ಅಮಾಯಕರಿಂದ ಹಣವನ್ನು ಲೂಟಿ ಮಾಡಲು ಪ್ರತಿದಿನ ಹೊಸ-ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿರುವುದು ಬೆಳಕಿಗೆ ಬಂದಿದ್ದು, ಇದರ ಬಗ್ಗೆ ಎಚ್ಚರ ವಹಿಸುವಂತೆ ಸೈಬರ್ ಕ್ರೈಂ ಪೊಲೀಸ್ ಇಲಾಖೆ ತಿಳಿಸಿದೆ.
ಕಳ್ಳರ ಖತರ್ನಾಕ್ ಐಡಿಯಾ: ಪೊಲೀಸರಿಂದಲೂ ಜಾಲ ಕಂಡು ಹಿಡಿಯಲು ಸಾದ್ಯವಾಗದಂತಹ ರೀತಿಯಲ್ಲಿ ಸೈಬರ್ ಕಳ್ಳರು ಖತರ್ನಾಕ್ ಐಡಿಯಾಗಳನ್ನು ರೂಪಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಸೈಬರ್ ಕ್ರಿಮಿನಲ್‌ಗಳು ವಿನೂತನ ಐಡಿಯಾಗಳೊಂದಿಗೆ ಹಣ ಲೂಟಿ ಮಾಡುತ್ತಿದ್ದಾರೆ. ಅಂಗಡಿಗಳಲ್ಲಿ ಕ್ಯೂ-ಆರ್ ಕೋಡ್ಗಳ ಮೂಲಕ ಹಣ ವರ್ಗಾಯಿಸಲಾಗಿದೆ ಎಂದು ವಂಚಕರು ಸುಳ್ಳು ಮೆಸೇಜ್ಗಳನ್ನು ತೋರಿಸಿ ಹಣ ಲಪಟಾಯಿಸುತ್ತಿದ್ದಾರೆ. ಇದಕ್ಕಾಗಿ ವಂಚಕರು ನಕಲಿ ಹಣ ವರ್ಗಾವಣೆ ಅಪ್ಲಿಕೇಶನ್ಗಳನ್ನು ಆರಿಸಿಕೊಂಡಿದ್ದಾರೆ.
ಸೈಬರ್ ಪ್ರಕರಣ: ಇತ್ತೀಚೆಗೆ ನಕಲಿ ಹಣ ವರ್ಗಾವಣೆ ವಂಚನೆಗಳು ಬೆಳಕಿಗೆ ಬಂದಿವೆ. ಯಾವುವು ಈ ನಕಲಿ ಹಣ ವರ್ಗಾವಣೆ ಅಪ್ಲಿಕೇಶನ್.. ಅಪರಾಧಿಗಳು ಅದನ್ನು ಹೇಗೆ ಬಳಸುತ್ತಾರೆ.. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೆ ಹೈದರಾಬಾದ್ನ ವನಸ್ಥಲಿಪುರಂನಲ್ಲಿ ನಡೆದ ಸೈಬರ್ ಕ್ರೈಂ ಪ್ರಕರಣ.
ಡಿಜಿಟಲ್ ಪಾವತಿ: ಏಪ್ರಿಲ್ 9 ರಂದು ವನಸ್ಥಲಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಸುಷ್ಮಾ ಬಳಿಯ ಹಣ ವರ್ಗಾವಣೆ ಕೇಂದ್ರಕ್ಕೆ ಯುವಕನೊಬ್ಬ ಬಂದಿದ್ದ. ನನಗೆ ನಗದು ಹಣದ ಅವಶ್ಯಕತೆಯಿದೆ. ನೀವು ನನಗೆ 30 ಸಾವಿರೂ ನಗದು ಹಣ ನೀಡಿ. ನಾನು ನಿಮಗೆ ಡಿಜಿಟಲ್ ಮೂಲಕ ಹಣ ವರ್ಗಾವಣೆ ಮಾಡುತ್ತೇನೆ ಎಂದು ಹಣ ವರ್ಗಾವಣೆ ಕೇಂದ್ರದ ಮಾಲೀಕನಿಗೆ ಕೇಳಿದ್ದಾನೆ. ಇದಕ್ಕೆ ಒಪ್ಪಿದ ಅಂಗಡಿ ಮಾಲೀಕ ಹಣ ವರ್ಗಾವಣೆ ಮಾಡಲು ಕ್ಯೂಆರ್ ಕೋಡ್ ನೀಡಿದ್ದಾರೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ಯುವಕ ಹಣ ಕಡಿತದ ಸಂದೇಶವನ್ನು ತೋರಿಸಿ ರೂ.30,000 ಕ್ಯಾಶ್ ನೀಡುವಂತೆ ಕೇಳಿದ್ದಾನೆ.
ಖಾತೆಗೆ ಜಮಾ ಆಗದ ಹಣ: ಆದರೆ ಅಂಗಡಿ ಮಾಲೀಕ ತನ್ನ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬ ಸಂದೇಶ ಬಂದಿಲ್ಲ. ಹೀಗಾಗಿ ನಾನು ನಿನಗೆ ನಗದು ಹಣ ನೀಡಲು ಸಾಧ್ಯವಿಲ್ಲ. ನನಗೆ ಸಂದೇಶ ಬರುವವರೆಗೆ ಸ್ವಲ್ಪ ಸಮಯ ಕಾಯುವಂತೆ ಅಂಗಡಿ ಮಾಲೀಕ ಯುವಕನಿಗೆ ಹೇಳಿದ್ದರು. ನನಗೆ ಬೇರೆ ಕೆಲಸವಿದೆ. ಆದಷ್ಟು ಬೇಗ ಕ್ಯಾಶ್ ಕೊಡಿ ಎಂದು ಮಾಲೀಕನನ್ನು ಕೇಳಿದ್ದಾನೆ. ಅದಕ್ಕೊಪ್ಪದ ಅಂಗಡಿ ಮಾಲೀಕ ಹಣ ನೀಡಲು ನಿರಾಕರಿಸಿದ್ದಾರೆ.
15 ಸಾವಿರವಾದ್ರೂ ಕೊಡಿ ಸರ್: ಕೊನೆಗೆ ಯುವಕ ಕನಿಷ್ಠ ರೂ.15,000 ನಗದನ್ನಾದರೂ ನೀಡುವಂತೆ ಮನವಿ ಮಾಡಿದ್ದಾನೆ. ಆದ್ರೂ ಸಹಿತ ಅಂಗಡಿ ಮಾಲೀಕ ಹಣ ನೀಡಲು ನಿರಾಕರಿಸಿದ್ದಾರೆ. ಇದರಿಂದ ಆ ಯುವಕ ಅಂಗಡಿಯಿಂದ ಹೊರಬಂದಿದ್ದಾನೆ. ಆತ ಹೋದ ನಂತರ ಅಂಗಡಿ ಮಾಲೀಕ ಯುವಕ ಹಣ ಲೂಟಿ ಮಾಡಲು ಬಂದಿರಬಹುದು ಎಂದು ಭಾವಿಸಿದ್ದರು.
ಮತ್ತೆ ಬೇರೆ ಅಂಗಡಿ ಸ್ಕೆಚ್: ಅಲ್ಲಿಂದ ಹೊರಟ ಆ ಯುವಕ ಎನ್‌ಜಿಒ ಕಾಲೋನಿಯಲ್ಲಿ ಮತ್ತೊಂದು ಹಣ ವರ್ಗಾವಣೆ ಕೇಂದ್ರಕ್ಕೆ ಹೋಗಿ ರೂ.30,000 ಕ್ಯಾಶ್ ಕೇಳಿದ್ದಾನೆ. ಆ ಶಾಪ್ ಮಾಲೀಕನ ಬಳಿಯೂ ಮತ್ತದೇ ರಾಗವನ್ನು ಹಾಡಿದ್ದಾನೆ. ನಾನು ಹಣವನ್ನು ಡಿಜಿಟಲ್ ಪೇಮೆಂಟ್ ಆ್ಯಪ್ ಮೂಲಕ ವರ್ಗಾವಣೆ ಮಾಡುತ್ತೇನೆ ನೀವು ನನಗೆ 30 ಸಾವಿರ ಹಾರ್ಡ್ ಕ್ಯಾಶ್ ನೀಡಿ ಎಂದಿದ್ದಾನೆ. ಆಯ್ತು ನೀವು ಹಣ ಕಳುಹಿಸಿ, ನಾನು ನಿಮಗೆ ಹಾರ್ಡ್ ಕ್ಯಾಶ್ ನೀಡುತ್ತೇನೆ ಎಂದು ಮಾಲೀಕ ಹೇಳಿದ್ದಾನೆ.
ಮಾಲೀಕನಿಗೆ ಪಂಗನಾಮ: ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ನಾನು ಡಿಜಿಟಲ್ ನಿಮಗೆ ಡಿಜಿಟಲ್ ಪೇ ಮಾಡಿದ್ದಾನೆ. ಇಲ್ಲಿ ನೋಡಿ ಹಣ ಕಟ್ಟ ಆಗಿರುವ ಸಂದೇಶ ಎಂದು ಆ ಅಂಗಡಿ ಮಾಲೀಕನಿಗೆ ತೋರಿಸಿದ್ದಾನೆ. ಅಂಗಡಿ ಮಾಲೀಕರು ಅವರ ಖಾತೆಯನ್ನು ಪರಿಶೀಲಿಸಿದಾಗ ಹಣ ಜಮಾ ಆಗಿರಲಿಲ್ಲ. ಹಾಗಾಗಿ ಅವರು ಯುವಕನನ್ನು ಸ್ವಲ್ಪ ಸಮಯ ಕಾಯುವಂತೆ ಹೇಳಿದ್ದರು. ನನಗೆ ಬೇರೆ ಕೆಲಸವುಂಟು, ನಾನು ಅಲ್ಲಿಗೆ ಅರ್ಜೆಂಟ್ ಆಗಿ ಹೋಗಬೇಕು. ದಯವಿಟ್ಟು ಹಾರ್ಡ್ ಕ್ಯಾಶ್ ನೀಡಿ ಎಂದು ಮನವಿ ಮಾಡಿಕೊಂಡಿದ್ದಾನೆ. ಅದಕ್ಕೆ ಅಂಗಡಿ ಮಾಲೀಕ, ಪರವಾಗಿಲ್ಲ.. ನೀವು 30 ಸಾವಿರ ರೂ. ತೆಗೆದುಕೊಂಡು ಹೋಗಿ. ನೆಟ್ವರ್ಕ್ ಸಮಸ್ಯಯಿಂದಾಗಿ ಹಣ ಜಮಾ ಆಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿ ಹಣ ಕೊಟ್ಟು ಕಳುಹಿಸಿದ್ದಾರೆ. ಈ ಮೂಲಕ ಆ ಯುವಕ ಅಂಗಡಿ ಮಾಲೀಕನಿಗೆ 30 ಸಾವಿರ ರೂಪಾಯಿ ಪಂಗನಾಮ ಹಾಕಿದ್ದಾನೆ.
ಪೊಲೀಸ್ ದೂರು: ಯುವಕ ಅಂಗಡಿಯಿಂದ ಹೊರಹೋಗಿ 3, 4 ಗಂಟೆ ಕಳೆದರೂ ಮಾಲೀಕರ ಖಾತೆಗೆ ಹಣ ಜಮಾ ಆಗಿರಲಿಲ್ಲ. ನಂತರ ನಕಲಿ ಹಣ ವರ್ಗಾವಣೆ ಆ್ಯಪ್ ಮೂಲಕ ಯುವಕನಿಂದ ಮೋಸ ಹೋಗಿದ್ದೇನೆ ಎಂದು ಭಾವಿಸಿ ವನಸ್ಥಲಿಪುರಂ ಪೊಲೀಸರಿಗೆ ಅಂಗಡಿ ಮಾಲೀಕರು ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತನಿಖೆಯಲ್ಲಿ, ನಕಲಿ ಹಣ ವರ್ಗಾವಣೆ ಅಪ್ಲಿಕೇಶನ್‌ಗಳಿಂದ ಅನೇಕ ಜನರು ಮೋಸ ಹೋಗಿದ್ದಾರೆ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ.
ಎಚ್ಚರಿಕೆ ಸಂದೇಶ: ಪ್ರಸ್ತುತ ಅಂತಹ ಹಲವಾರು ನಕಲಿ ಆ್ಯಪ್ಗಳನ್ನು ಜನ ನಂಬುತ್ತಿದ್ದಾರೆ. ಹಾಗಾಗಿ ಸೈಬರ್ ಕಳ್ಳರು ಅದರ ಉಪಯೋಗ ಪಡೆದುಕೊಂಡು ಸಾವಿರಗಟ್ಟಲೇ ಹಣವನ್ನು ಲಪಟಾಯಿಸುತ್ತಿದ್ದಾರೆ. ಹಾಗಾಗಿ ಯಾರಾದರೂ ಹಣ ವರ್ಗಾವಣೆ ಮಾಡುವುದಾಗಿ ಹೇಳಿದರೆ ಕಣ್ಣುಮುಚ್ಚಿ ಹಣ ನೀಡಬೇಡಿ ಎಂದು ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಹಣ ಖಾತೆಗೆ ಜಮಾ ಆಗಿದೆ ಎಂಬುದನ್ನು ಖಾತ್ರಿ ಪಡಿಸಿಕೊಂಡ ನಂತರವೇ ಹಾರ್ಡ್ ಕ್ಯಾಶ್ ನೀಡಿ ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ: ಟ್ರಾಫಿಕ್ ಸಿಗ್ನಲ್,ಟೋಲ್‌ಗೇಟ್‌ಗಳ ಮಾಹಿತಿ: ಗೂಗಲ್ ಮ್ಯಾಪ್‌ನ 5 ಹೊಸ ಅಪ್‌ಡೇಟ್ಸ್ ಹೀಗಿದೆ..