ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಹತ್ತು ದಿನಗಳ ಕಾಲದ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ.
ಆಗಸ್ಟ್ 24ರಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿಯ ಮೇಲೆ ತಮಿಳುನಾಡು ಮೂಲದ ಏಳು ಮಂದಿ ಸಾಮೂಹಿಕ ಅತ್ಯಾಚಾರ ಮಾಡಿ ತಲೆ ಮರೆಸಿಕೊಂಡಿದ್ದು, ಅದರಲ್ಲಿ ಆರು ಜನರನ್ನು ಪೊಲೀಸರು ಬಂಧಿಸಿ, ವಿಚಾರಣೆ ಹಾಗೂ ಸ್ಥಳ ಮಹಜರು ನಡೆಸಿದ್ದರು. ಆನಂತರ ನಗರದ ಮೂರನೇ ಜೆಎಂಎಫ್ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹತ್ತು ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದರು. ಈ ಕಾಲಾವಕಾಶ ಇಂದಿಗೆ ಮುಗಿಯಲಿದ್ದು, ಇಂದು ಆರು ಜನ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.
ಏಳನೇ ಆರೋಪಿ ಬಂಧನ?
ಗ್ಯಾಂಗ್ ರೇಪ್ ಪ್ರಕರಣದಲ್ಲಿ ಮೊದಲು ಪೊಲೀಸರು ಐದು ಆರೋಪಿಗಳನ್ನು ಬಂಧಿಸಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಈ ಪ್ರಕರಣದಲ್ಲಿ ಏಳು ಜನ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ. ಆನಂತರ ತಮಿಳುನಾಡಿನ ತಿರುಪ್ಪೂರಿನ ಬಳಿಯ ಗ್ರಾಮವೊಂದರಲ್ಲಿ ಆರನೇ ಆರೋಪಿಯನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕಾಗಿ ಮೈಸೂರು ಪೊಲೀಸರು ತಮಿಳುನಾಡಿನಲ್ಲಿದ್ದು, ಏಳನೇ ಆರೋಪಿಯನ್ನು ನಿನ್ನೆ ಬಂಧಿಸಲಾಗಿದೆ ಎಂಬ ಪೊಲೀಸ್ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಯಾವುದೇ ಖಚಿತ ಮಾಹಿತಿಯನ್ನು ಪೊಲೀಸರು ನೀಡುತ್ತಿಲ್ಲ. ಆದರೂ ಮೂಲಗಳ ಪ್ರಕಾರ ಗ್ಯಾಂಗ್ ರೇಪ್ ಪ್ರಕರಣದ ಏಳನೇ ಆರೋಪಿಯನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ನಂಜನಗೂಡಿನಲ್ಲಿ ಮಹಜರ್
ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಮಾಡಿದ ಕಾಮುಕರು, ನಂಜನಗೂಡು ಪಟ್ಟಣದ ಮೊಬೈಲ್ ಅಂಗಡಿಗೆ ಭೇಟಿ ಕೊಟ್ಟಿದ್ದರು. ನಂಜನಗೂಡು ಪಟ್ಟಣದ ಆರ್.ಪಿ.ರಸ್ತೆಯಲ್ಲಿರುವ ಸಂಗೀತ ಮೊಬೈಲ್ ಶಾಪ್ನಲ್ಲಿ ಆಗಸ್ಟ್ 24ರಂದು ಬೆಳಗ್ಗೆ ಗೂಡ್ಸ್ ವಾಹನದಲ್ಲಿ 8.20ಕ್ಕೆ ಭೇಟಿ ನೀಡಿದ್ದ ಕಾಮುಕರು, 180 ರೂ.ನೀಡಿ ಮೊಬೈಲ್ ಚಾರ್ಜಿಂಗ್ ವೈಯರ್ ಖರೀದಿ ಮಾಡಿದ್ದರು.
ಹೇಳಿಕೆ ನೀಡದ ಸಂತ್ರಸ್ತೆ
ಗ್ಯಾಂಗ್ರೇಪ್ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಮುಂಬೈ ಮೂಲದ ವಿದ್ಯಾರ್ಥಿನಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಯಾವುದೇ ಹೇಳಿಕೆ ಹಾಗೂ ದೂರು ನೀಡದೇ ಮುಂಬೈಗೆ ತಂದೆ ಜೊತೆಗೆ ಹೋಗಿದ್ದು, ತಮ್ಮ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಆಕೆಯ ಹೇಳಿಕೆ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಮುಖ್ಯವಾಗಿದ್ದು, ಮೈಸೂರು ಪೊಲೀಸರು ಮುಂಬೈಗೆ ತೆರಳಲು ಸಿದ್ದತೆ ನಡೆಸಿದ್ದಾರೆ. ಮತ್ತೊಂದು ಕಡೆ ಗ್ಯಾಂಗ್ರೇಪ್ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಇತರ ಸಾಕ್ಷಿಗಳ ಸಂಗ್ರಹದಲ್ಲಿ ಪೊಲೀಸರು ತೊಡಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಟು ಕೊಡಗು: ಅಜ್ಜಿ - ತಾತನ ನೋಡಲು 30 ಕಿ.ಮೀ ಕಾಲ್ನಡಿಗೆಯಲ್ಲೇ ಪಯಣಿಸಿದ್ದ ಬಾಲಕಿ..!