ಮುಂಬೈ(ಮಹಾರಾಷ್ಟ್ರ): ತಡರಾತ್ರಿ ಮುಂಬೈನ ಮಾಲ್ಡಾ ಮಲ್ವಾನಿಯಲ್ಲಿ ಎರಡು ಅಂತಸ್ತಿನ ಕಟ್ಟಡ ಕುಸಿತದ ದುರಂತದಲ್ಲಿ ಈವರೆಗೆ 8 ಮಂದಿ ಮಕ್ಕಳು ಸೇರಿ 11 ಮಂದಿ ಮೃತಪಟ್ಟಿದ್ದಾರೆ. 18 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದು ಬಂದಿದೆ. ಇನ್ನು, ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಟ್ಟಡ ಅವಶೇಷಗಳಡಿ ಸಿಲುಕಿರುವವರಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.
ಘಟನೆ ಸಂಬಂಧ ಕಟ್ಟಡದ ಮಾಲೀಕ ಹಾಗೂ ಕಾಂಟ್ರ್ಯಾಕ್ಟರ್ ವಿರುದ್ಧ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಬಂದಿದ್ದ ತೌಕ್ತೆ ಚಂಡಮಾರುತದ ಬಳಿಕ ಮಾಲೀಕ ಕಟ್ಟಡಕ್ಕೆ ಸಣ್ಣ ರಿಪೇರಿ ಮಾಡಿಸಿದ್ದ ಎಂದು ಮುಂಬೈನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಕಮೀಷನರ್ ವಿಶ್ವಾಸ್ ನಂಗ್ರೆ ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ: ನೇರ ಪ್ರಸಾರದ ವೇಳೆ ಪಾಕ್ ಸಂಸದನಿಗೆ ಕಪಾಳಮೋಕ್ಷ ಮಾಡಿದ ಮಹಿಳಾ ನಾಯಕಿ
ದುರಂತಕ್ಕೆ ಕಂಬನಿ ಮಿಡಿದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಮಾತ್ರವಲ್ಲದೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಘಟನೆಗೆ ಶೋಕ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಟ್ಟಡ ಕುಸಿತ ಪ್ರಕರಣ ನೋವು ತಂದಿದ್ದು, ಈ ಸಂಕಷ್ಟದ ಸಮಯದಲ್ಲಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿಕೆಯ ಟ್ವೀಟ್ ಮಾಡಿದ್ದಾರೆ. ಜೊತೆಗೆ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ಹಾಗೂ ಗಾಯಗೊಂಡವರಿಗೆ 50 ಸಾವಿರ ಪರಿಹಾರ ಘೋಷಿಸಿದ್ದಾರೆ.