ಮುಂಬೈ: 21 ವರ್ಷದ ಚಿಕ್ಕ ವಯಸ್ಸಿನ ಮಾಡೆಲ್ ಒಬ್ಬರನ್ನು ದೊಡ್ಡ ಸ್ಟಾರ್ ಜೊತೆ ಎರಡು ಚಿತ್ರಗಳಲ್ಲಿ ನಟಿಸುವ ಅವಕಾಶ ನೀಡುತ್ತೇವೆ ಎಂದು ವಂಚಿಸಿರುವ ಘಟನೆ ದೇಶದ ವಾಣಿಜ್ಯ ನಗರಿಯಲ್ಲಿ ನಡೆದಿದೆ.
ಇಬ್ಬರು ನಿರ್ಮಾಪಕರೆಂದು ಹೇಳಿಕೊಂಡು ಮಾಡೆಲ್ಗೆ 10 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮಹಿಳೆ ನೀಡಿದ ದೂರಿನ ಮೇರೆಗೆ ಇಬ್ಬರು ಆರೋಪಿಗಳಾದ ಪಿಯೂಷ್ ಜೈನ್ ಮತ್ತು ಮಂಥನ್ ರೂಪಾರೆಲೆ ವಿರುದ್ಧ ದಹಿಸರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಯುವತಿ ದೂರಿನಲ್ಲಿ ಹೇಳಿರುವುದೇನು?: ದೂರುದಾರರು ಮುಂಬೈ ಮಹಾನಗರದಲ್ಲಿ ಮಾಡೆಲಿಂಗ್ ಮಾಡುತ್ತಿದ್ದು, ಬಾಲಿವುಡ್ ಚಿತ್ರಗಳಲ್ಲಿ ಪಾತ್ರಕ್ಕಾಗಿ ಎದುರು ನೋಡುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ನಕಲಿ ನಿರ್ಮಾಪಕರು ಯುವತಿಗೆ ವಂಚನೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಜೈನ್ ಮತ್ತು ರೂಪಾರೆಲೆ ತಮ್ಮನ್ನು ಚಲನಚಿತ್ರ ನಿರ್ಮಾಣ ಕಂಪನಿಯ ಮಾಲೀಕರೆಂದು ಹೇಳಿಕೊಂಡಿದ್ದರು. RC-15 ಮತ್ತು ಜೈಲರ್ ಎಂಬ ಶೀರ್ಷಿಕೆಯ ಎರಡು ಚಲನಚಿತ್ರಗಳನ್ನು ನಿರ್ಮಿಸುತ್ತಿರುವುದಾಗಿ ಯುವತಿಗೆ ನಂಬಿಸಿದ್ದರು. ಅಷ್ಟೇ ಅಲ್ಲ ದಕ್ಷಿಣ ಭಾರತದ ಮೆಗಾ ಸ್ಟಾರ್ ಮಗಳಾಗಿ ನಟಿಸಲಿದ್ದಾರೆ ಎಂದು ಮಾಡೆಲ್ಗೆ ನಂಬಿಕೆ ಹುಟ್ಟಿಸಿದ್ದರು.
ಇಬ್ಬರೂ ಜುಲೈನಲ್ಲಿ ಮಾಡೆಲ್ಗೆ ಹಲವಾರು ಬಾರಿ ಕರೆ ಮಾಡಿ ಚಲನಚಿತ್ರಗಳಲ್ಲಿ ಪಾತ್ರ ನೀಡುವುದಾಗಿ ಭರವಸೆ ನೀಡಿದ್ದರು. ಅವರು ಚಲನಚಿತ್ರ ದಾಖಲೆಗಳ ತಯಾರಿಗಾಗಿ ಶುಲ್ಕ ಮತ್ತು ಇತರ ಶುಲ್ಕಗಳ ನೆಪದಲ್ಲಿ 10,31,000 ರೂ.ಗಳನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಂತೆ 21 ಹರೆಯದ ಮಾಡೆಲ್ ಮನವೊಲಿಸಿದ್ದರು. ಅವರು ನಂಬುವಂತೆ ಚಲನಚಿತ್ರಗಳಿಗೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಕಳುಹಿಸಿ ಈ ವಂಚನೆ ಮಾಡಿದ್ದರು ಪೊಲೀಸ್ ಅಧಿಕಾರಿ ಪ್ರಕರಣದ ಮಾಹಿತಿ ನೀಡಿದ್ದಾರೆ.
ಮೋಸ ಹೋಗಿದ್ದು ಗೊತ್ತಾಗಿದ್ದು ಯಾವಾಗ?: ಆರೋಪಿಗಳಿಬ್ಬರು ಮಹಿಳೆಯ ಕರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಆಗ ಎಚ್ಚೆತ್ತುಕೊಂಡಿರುವ ಮಾಡೆಲ್ ಶುಕ್ರವಾರ ಪೊಲೀಸರನ್ನು ಸಂಪರ್ಕಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ವಂಚನೆ ಮತ್ತು ನಕಲಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದುವರೆಗೆ ಯಾವುದೇ ಬಂಧನವಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನು ಓದಿ: ಭೀಕರ ರಸ್ತೆ ಅಪಘಾತ:ಟ್ರ್ಯಾಕ್ಟರ್ ಟ್ರ್ಯಾಲಿ ಪಲ್ಟಿಯಾಗಿ 10 ಜನರ ಸಾವು.. 15 ಮಂದಿ ಸ್ಥಿತಿ ಗಂಭೀರ