ವಿಶಾಖಪಟ್ಟಣ: ಯುವತಿಯೊಬ್ಬರು ಲೋನ್ ಆ್ಯಪ್ ಸಹವಾಸಕ್ಕೆ ಹೋಗದಿದ್ದರೂ ಸಂಕಷ್ಟ ಸಿಲುಕಿರುವ ಪ್ರಕರಣವೊಂದು ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಸಾಲ ಮರು ಪಾವತಿಸದಿದ್ದರೆ ವೇಶ್ಯೆಯ ರೀತಿಯಲ್ಲಿ ಜಾಹೀರಾತು ನೀಡಲಾಗುವುದು ಎಂದು ಬೆದರಿಕೆ ಹಾಕಿದ್ದ ಕೆಲವರನ್ನು ವಿಶಾಖಪಟ್ಟಣದ ಸೈಬರ್ ಕ್ರೈಮ್ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ.
ಪ್ರಕರಣದ ವಿವರ: ಪೊಲೀಸರು ನೀಡಿದ ಮಾಹಿತಿಯ ಪ್ರಕಾರ- ಲೋನ್ ಆ್ಯಪ್ ಕಂಪನಿಯೊಂದು ವ್ಯಕ್ತಿಯೊಬ್ಬನಿಗೆ 4 ಸಾವಿರ, 2500 ಹಾಗೂ 2500 ರೂಪಾಯಿಗಳಂತೆ ಮೂರು ಬಾರಿ ಲೋನ್ ನೀಡಿತ್ತು. ಆತ ಆ ಸಾಲವನ್ನು ಸರಿಯಾಗಿ ಮರುಪಾವತಿ ಕೂಡ ಮಾಡಿದ್ದರು. ಆದ್ರೆ ಮತ್ತೆ ಲೋನ್ ಬೇಕೆಂದು ಕೇಳದಿದ್ದರೂ ಅವರ ಖಾತೆಗೆ 4 ಸಾವಿರ ರೂಪಾಯಿ ಜಮೆಯಾಯಿತು. ಆದರೆ ಈ ಬಾರಿ ಆ ವ್ಯಕ್ತಿ ಮರುಪಾವತಿ ಮಾಡಲಿಲ್ಲ.
ಆದರೆ ವಿಚಿತ್ರ ಏನೆಂದರೆ ಖಾತೆಯಲ್ಲಿ 4 ಸಾವಿರ ರೂಪಾಯಿ ಜಮೆಯಾದ ವ್ಯಕ್ತಿಯ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿ ಹೆಸರಿದೆ ಎನ್ನುವ ಒಂದೇ ಕಾರಣಕ್ಕೆ ಈ ಪ್ರಕರಣಕ್ಕೆ ಯಾವ ಕಡೆಯಿಂದಲೂ ಸಂಬಂಧವಿಲ್ಲದ ಯುವತಿಯೊಬ್ಬರಿಗೆ ಲೋನ್ ಆ್ಯಪ್ ಕಡೆಯಿಂದ ಮೆಸೇಜ್ ಬರಲಾರಂಭಿಸಿದವು. ಆ ವ್ಯಕ್ತಿ ಪಡೆದ ಸಾಲವನ್ನು ಯುವತಿ ಪೂರ್ಣವಾಗಿ ಪಾವತಿಸದಿದ್ದರೆ, ಆಕೆಯನ್ನು ವೇಶ್ಯೆ ಎಂದು ಬಿಂಬಿಸಿ ಆ ಫೋಟೊವನ್ನು ಆಕೆಗೆ ಗೊತ್ತಿರುವವರಿಗೆಲ್ಲ ವೈರಲ್ ಮಾಡಲಾಗುವುದು ಎಂದು ಬೆದರಿಸಲಾಯಿತು.
ಲೋನ್ ಆ್ಯಪ್ನ ಈ ಕಿರುಕುಳ ತಾಳಲಾಗದೆ ಯುವತಿ ಆತ್ಮಹತ್ಯೆಗೆ ಯತ್ನಿಸಿದರು. ನಂತರ ವಿಷಯ ತಿಳಿದ ಸೈಬರ್ ಕ್ರೈಮ್ ಪೊಲೀಸರು, ಸಿಐ ಭವಾನಿಪ್ರಸಾದ್ ನೇತೃತ್ವದಲ್ಲಿ ತನಿಖೆ ಆರಂಭಿಸಿದರು. ಕಿರುಕುಳ ನೀಡುತ್ತಿದ್ದವರ ವಾಟ್ಸ್ಆ್ಯಪ್ ಲೊಕೇಶನ್ ಅಸ್ಸೋಂ ಎಂದು ಬ್ಯಾಂಕ್ ಖಾತೆ ಸಂಖ್ಯೆ ಹರಿಯಾಣ ಎಂದು ತನಿಖೆಯಲ್ಲಿ ಗೊತ್ತಾಗಿತ್ತು. ನಂತರ ಇತರ ಸಂಖ್ಯೆಗಳನ್ನು ಪರಿಶೀಲಿಸಿದಾಗ ಆರೋಪಿಗಳು ದೆಹಲಿಯಲ್ಲಿರುವುದು ಗೊತ್ತಾಗಿತ್ತು.
ಇದೆಲ್ಲವನ್ನು ನೇಹಾಕುಮಾರಿ ಎಂಬುವಳು ಮಾಡುತ್ತಿರುವುದು ತಿಳಿಯಿತು. ನೇಹಾಕುಮಾರಿ ಮತ್ತು ಆಕೆಯ ತಂಗಿ ಪೂಜಾ ಇಬ್ಬರೂ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಆಕೆಯ ಸಹೋದರ ರಾಹುಲ್ ಮೆಹ್ತಾ ಎಂಬಾತ ಆಕೆಯ ಎಚ್ಡಿಎಫ್ಸಿ ಖಾತೆ ಬಳಸುತ್ತಿರುವುದು ತಿಳಿಯಿತು. ಸದ್ಯ ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲ ಐವರು ಆರೋಪಿಗಳನ್ನು ಪತ್ತೆ ಮಾಡಲಾಗಿದೆ.
ರಾಹುಲ್ ಮೆಹ್ತಾನಿಗೆ ಸಹಾಯ ಮಾಡುತ್ತಿದ್ದ ಅಭಿಷೇಕ್ ಎಂಬಾತನನ್ನು ಬಂಧಿಸಲಾಗಿದೆ. 41A CrPC ಅಡಿಯಲ್ಲಿ ನೇಹಾಕುಮಾರಿಗೆ ನೋಟಿಸ ನೀಡಲಾಗಿದೆ. ಬಂಧಿತ ಇಬ್ಬರನ್ನು ದೆಹಲಿಯ ದ್ವಾರಕಾ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಶಾಖಪಟ್ಟಣಕ್ಕೆ ಕರೆತರಲಾಗಿದೆ. ಅವರನ್ನು 15 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪೊಲೀಸರು ಇನ್ನಿಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.