ಕಾರವಾರ: ಸಾರಿಗೆ ಸಿಬ್ಬಂದಿ ಹೋರಾಟಕ್ಕೆ ಅವರ ಕುಟುಂಬಸ್ಥರು ಸಾತ್ ನೀಡಿದ್ದು ಉತ್ತರಕನ್ನಡ ಜಿಲ್ಲೆಯ ವಿವಿಧೆಡೆ ಬೃಹತ್ ಪ್ರತಿಭಟನೆ ನಡೆಸಿ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದಾರೆ.
6ನೇ ವೇತನ ಆಯೋಗದ ಶಿಫಾರಸು ಜಾರಿಗೆ ತರಲು ಸಾಧ್ಯವೇ ಇಲ್ಲ ಎಂದು ಸರ್ಕಾರ ಕಡ್ಡಿ ಮುರಿದಂತೆ ಹೇಳಿದರೂ, ಈಗ ಕೊಡುತ್ತಿರುವ ಸಂಬಳದಿಂದ ಬದುಕಲು ಸಾಧ್ಯವೆ ಇಲ್ಲ ಎಂದು ಸಾರಿಗೆ ನೌಕರರು ಪಟ್ಟು ಹಿಡಿದಿದ್ದಾರೆ. ಆದರೆ, ಸರ್ಕಾರ ನೌಕರರ ಮೇಲೆ ವರ್ಗಾವಣೆ ಅಸ್ತ್ರ ಪ್ರಯೋಗಿಸಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದ 48 ಸಿಬ್ಬಂದಿಯನ್ನು ವರ್ಗಾವಣೆ ಮಾಡಿತ್ತು. ಇದಕ್ಕೆ ಹೆದರಿ ಕೆಲವರು ಕರ್ತವ್ಯಕ್ಕೆ ಹಾಜರಾಗಿದ್ದರು.
ಆದರೆ, ಇಂದು ನೌಕರರ ಕುಟುಂಬಸ್ಥರು ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ ಸೇರಿದಂತೆ ವಿವಿಧ ಭಾಗಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸರ್ಕಾರ ಮಾರ್ಚ್ ತಿಂಗಳ ಸಂಬಳ ಹಾಕಿಲ್ಲ. ನಾಳೆ ಎಲ್ಲರೂ ಹಬ್ಬ ಮಾಡ್ತಾರೆ. ಆದರೆ ನಾವು ಮಾತ್ರ ಬೀದಿಯಲ್ಲಿ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ, ಸಾರಿಗೆ ಸಚಿವರು ಕೂಡಲೇ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಅಲ್ಲದೆ, ವಾರಗಳ ಕಾಲ ಮನೆ ಮಕ್ಕಳನ್ನು ಬಿಟ್ಟು ದುಡಿದರು ಸಾರಿಗೆ ಸಿಬ್ಬಂದಿಗೆ ನೆಮ್ಮದಿಯ ಜೀವನ ಇಲ್ಲದಾಗಿದೆ. ಕೂಡಲೇ ಸರ್ಕಾರ ಬೇಡಿಕೆ ಈಡೇರಿಕೆಗೆ ಮುಂದಾಗಬೇಕು ಇಲ್ಲದೇ ಇದ್ದಲ್ಲಿ ಆತ್ಮಹತ್ಯೆಗೂ ಮುಂದಾಗುವುದಾಗಿ ಕುಟುಂಬಸ್ಥರು ಎಚ್ಚರಿಸಿದ್ದಾರೆ.