ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಸಾಲೆ ಉದ್ಯಮಿಗೆ ಶಾಕ್ ನೀಡಿರುವ ಆದಾಯ ತೆರಿಗೆ( ಸೆಂಟ್ರಲ್ ಬೋರ್ಡ್ ಆಫ್ ಇನ್ ಡೈರೆಕ್ಟ್ ಟ್ಯಾಕ್ಸ್) ಅಧಿಕಾರಿಗಳು ಪಿಯೂಷ್ ಜೈನ್ ಎಂಬುವರ ಮನೆ ಮೇಲೆ ದಾಳಿ ಮಾಡಿ ಬರೋಬ್ಬರಿ 150 ಕೋಟಿ ರೂಪಾಯಿ ಅಕ್ರಮ ಹಣ ಪತ್ತೆ ಹಚ್ಚಿದ್ದಾರೆ.
ಆದಾಯ ತೆರಿಗೆ ಕಟ್ಟದೆ ಸರ್ಕಾರಕ್ಕೆ ವಂಚನೆ ಮಾಡಿರುವುದನ್ನು ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ನಕಲಿ ಇನ್‌ವಾಯ್ಸ್ ಹಾಗೂ ಇ - ವೇ ಬಿಲ್‌ಗಳ ಮೂಲಕ ತೆರಿಗೆ ವಂಚನೆ ಮಾಡಿದ ಆರೋಪದಲ್ಲಿ ಕಾನ್ಪುರದಲ್ಲಿರುವ ಪಿಯೂಷ್ ಮನೆಯಲ್ಲಿ ಶೋಧ ನಡೆಸಿದ ಅಧಿಕಾರಿಗಳೇ ಬೆಚ್ಚಿ ಬಿದ್ದಿದಾರೆ. ಯಾಕೆಂದರೆ ಈತನ ಮನೆಯಲ್ಲಿನ ಬೀರುಗಳಲ್ಲಿ ನೋಟುಗಳ ಬಂಡಲ್‌ಗಳು ಸಿಕ್ಕಿವೆ.
ನಿನ್ನೆ ದಾಳಿ ನಡೆಸಿದ ಅಧಿಕಾರಿಗಳು ಇಂದು ಬೆಳಗಿನ ವೇಳೆಗೆ ಹಣ ಎಣಿಸಿದ್ದು, ಸುಮಾರು 150 ಕೋಟಿ ರೂಪಾಯಿ ಇದೆ ಎಂದು ಮಾಹಿತಿ ನೀಡಿದ್ದಾರೆ.
![in kanpur crores rupees recovered](https://etvbharatimages.akamaized.net/etvbharat/prod-images/13997567_casssssh.jpg)
ಪಿಯೂಷ್ ಜೈನ್ ಅವರ ಮನೆಯಲ್ಲಿ ಮೂರು ನೋಟು ಎಣಿಕೆ ಯಂತ್ರಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಎರಡು ಬೀರುಗಳಲ್ಲಿ ನೋಟುಗಳ ಬಂಡಲ್‌ಗಳನ್ನು ಜೋಡಿಸಲಾಗಿತ್ತು. ಅವುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ನೋಟುಗಳ ಬಂಡಲ್‌ಗಳನ್ನು ಅಲ್ಲಿಂದ ಸಾಗಿಸಲು ಹತ್ತಾರು ಪೆಟ್ಟಿಗೆಗಳನ್ನೂ ಸಿದ್ಧಪಡಿಸಲಾಗಿದೆ.
![in kanpur crores rupees recovered](https://etvbharatimages.akamaized.net/etvbharat/prod-images/13997567_cashdd.jpg)
ಪಿಯೂಷ್ ಸಮಾಜವಾದಿ ಪಕ್ಷದ ನಾಯಕರಾಗಿದ್ದಾರೆ. ಅವರು ಇತ್ತೀಚೆಗೆ ಸಮಾಜವಾದಿ ಸೆಂಟ್ ಹೆಸರಿನಲ್ಲಿ ಕಂಪನಿ ತೆರೆದು ಸುಗಂಧ ದ್ರವ್ಯದ ವ್ಯವಹಾರವನ್ನು ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್ಪುರ, ಗುಜರಾತ್ ಮತ್ತು ಮುಂಬೈ ಸೇರಿದಂತೆ ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಅಧಿಕಾರಿಗಳು ಇನ್ನೂ ಶೋಧ ನಡೆಸುತ್ತಿದ್ದಾರೆ.
![in kanpur crores rupees recovered](https://etvbharatimages.akamaized.net/etvbharat/prod-images/13997567_cash.jpg)
150 ಕೋಟಿ ಪತ್ತೆ ಎಸ್ಪಿಗೆ ಹಿನ್ನಡೆ!
ಇನ್ನು ನಾಲ್ಕು ತಿಂಗಳಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಸಮಾಜವಾದಿ ಪಕ್ಷಕ್ಕೆ ಸೇರಿದ ನಾಯಕರೊಬ್ಬರ ಮನೆಯಿಂದ ಭಾರಿ ಮೊತ್ತದ ಹಣ ಪತ್ತೆಯಾಗಿರುವುದು ಸಂಚಲನ ಮೂಡಿಸಿದೆ. ಮುಂದಿನ ದಿನಗಳಲ್ಲಿ ಈ ವಿಚಾರ ರಾಜಕೀಯ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಚೀನಾಕ್ಕೆ ಭಾರತದಿಂದ ಶಾಕ್ ಮೇಲೆ ಶಾಕ್.. ಡ್ರ್ಯಾಗನ್ ರಾಷ್ಟ್ರದ ಜತೆ ವಹಿವಾಟು ನಡೆಸುವ ಸಂಸ್ಥೆಗಳ ಮೇಲೆ ಐಟಿ ದಾಳಿ