ಬೆಂಗಳೂರು: ನಕಲಿ ಮೆಡಿಕಲ್ ಕಂಪನಿ ಸೋಗಿನಲ್ಲಿ ರೆಮ್ಡಿಸಿವರ್ ಇಂಜೆಕ್ಷನ್ ಸೇರಿದಂತೆ ಕೊರೊನಾ ಸಂಬಂಧಿತ ಔಷಧಿ ಮಾರಾಟ ಮಾಡುವುದಾಗಿ ನಂಬಿಸಿ, ಸಾರ್ವಜನಿಕರಿಂದ ಹಣ ಸುಲಿಗೆಗೆ ಇಳಿದಿದ್ದ ವಿದೇಶಿ ಪ್ರಜೆ ಸೇರಿ ಇಬ್ಬರು ಆರೋಪಿಗಳನ್ನು ನಗರ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಓದಿ: ಚಾಕುವಿನಿಂದ ಬೆದರಿಸಿ, ಒಡಹುಟ್ಟಿದ ಸಹೋದರಿಯರ ಮೇಲೆ ಅತ್ಯಾಚಾರ
ವಿದ್ಯಾರಣ್ಯಪುರದ ಮೊಹಮ್ಮದ್ ಇಸ್ಮಾಯಿಲ್ ಖಾದ್ರಿ ಹಾಗೂ ನೈಜಿರಿಯಾ ಮೂಲದ ಅಳದೆ ಅಬ್ದುಲ್ಲಾ ಯೂಸುಫ್ ಬಂಧಿತ ಆರೋಪಿಗಳು. ಮೊಹಮ್ಮದ್ ಇಸ್ಮಾಯಿಲ್ ಸಿಮ್ ವ್ಯಾಪಾರಿಯಾಗಿದ್ದು, ಯಲಹಂಕದಲ್ಲಿ ವಾಸವಾಗಿದ್ದ ಪ್ರಕರಣದ ಎರಡನೇ ಆರೋಪಿ ಸ್ನೇಹಿತನಾಗಿದ್ದ. ಕೊರೊನಾ ಬಿಕ್ಕಟ್ಟು ನಡುವೆಯೂ ದುರ್ಬಳಕೆ ಮಾಡಿಕೊಂಡ ಆರೋಪಿಗಳು ವಾಟ್ಸಾಪ್ ಗಳ ಮೂಲಕ ರೆಮಿಡಿಸಿವರ್ ಇಂಜಕ್ಷನ್ ಹಾಗೂ ಕೊರೊನಾಗೆ ಸಂಬಂಧಿಸಿದಂತೆ ಮಾತ್ರೆಗಳನ್ನು ಮೆಡಿಕಲ್ ಸ್ಟೋರ್ ನಲ್ಲಿ ಮಾರಾಟ ಮಾಡುವುದಾಗಿ ನಂಬಿಸಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ಬ್ಯಾಂಕ್ ಅಕೌಂಟ್ ಗೆ 10 ಸಾವಿರ ಪಡೆಯುತ್ತಿದ್ದ:
ನಗರದ ವಿವಿಧ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿದ್ದ ಮೊಹಮ್ಮದ್ ಒಂದು ಬ್ಯಾಂಕ್ ಖಾತೆ ವಿವರ ನೀಡಿದರೆ 10 ಸಾವಿರ ರೂಪಾಯಿ ಪಡೆಯುತ್ತಿದ್ದ. ಇದೇ ರೀತಿ 10ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ನೈಜಿರಿಯಾ ಪ್ರಜೆಗೆ ನೀಡಿ ಹಣ ಪಡೆದಿದ್ದ. ಜೊತೆಗೆ ಸಿಮ್ ಕಾರ್ಡ್ ಗಳನ್ನು ಪಡೆದಿದ್ದ. ಹೊಸ ಹೊಸ ನಂಬರ್ ಗಳ ಮೂಲಕ ಮೆಡಿಕಲ್ ಕಂಪನಿ ಹೆಸರಿನಲ್ಲಿ ಕೊರೊನಾ ಔಷಧಿ ನೀಡುವುದಾಗಿ ಹೇಳಿ ವಾಟ್ಸಾಪ್ ಗಳಲ್ಲಿ ಸಂದೇಶ ಹರಿಬಿಡುತ್ತಿದ್ದ.
ಇದನ್ನು ನಂಬುತ್ತಿದ್ದ ಸಾರ್ವಜನಿಕರು ಆರೋಪಿಗಳನ್ನು ಸಂಪರ್ಕಿಸಿ ಕೊರೊನಾ ಔಷಧಿ ಪಡೆಯಲು ಆನ್ಲೈನ್ ಮುಖಾಂತರ ಮುಂಗಡ ಹಣ ಪಾವತಿ ಮಾಡುತ್ತಿದ್ದರು. ಹಣ ಖಾತೆಗೆ ಬೀಳುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಇಬ್ಬರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ನಾಲ್ಕು ಮೊಬೈಲ್ ಫೋನ್ ಗಳು, ಹಾರ್ಡ್ ಡಿಸ್ಕ್, ವಿವಿಧ ಕಂಪನಿಯ 110 ಸಿಮ್ ಕಾರ್ಡ್ ಗಳು, 10 ಬ್ಯಾಂಕ್ ಖಾತೆಗಳಲ್ಲಿ ಇದ್ದ 4 ಲಕ್ಷ ರೂಪಾಯಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ಧ ಬೆಂಗಳೂರು ಹಾಗೂ ಬೀದರ್ ನಲ್ಲಿ ಒಟ್ಟು ನಾಲ್ಕು ಪ್ರಕರಣ ದಾಖಲಾಗಿವೆ. ತುಂಬಾ ಜನರಿಗೆ ಕೊರೊನಾ ಔಷಧಿ ಮಾರಾಟ ಸೋಗಿನಲ್ಲಿ ಮೋಸ ಮಾಡಿರುವ ಸಾಧ್ಯತೆಯಿದ್ದು, ಈ ಬಗ್ಗೆ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.