ರಾಣೆಬೆನ್ನೂರು: ಕೌಟುಂಬಿಕ ಕಲಹ ಹಿನ್ನೆಲೆ ಗಂಡನೋರ್ವ ನಡು ರಸ್ತೆಯಲ್ಲೇ ಹೆಂಡತಿಯನ್ನು ಕೊಲೆ ಮಾಡಲು ಮುಂದಾಗಿದ್ದು, ಕೊನೆಗೆ ತಾನೂ ಕತ್ತು ಕೊಯ್ದುಕೊಂಡ ಘಟನೆ ರಾಣೆಬೆನ್ನೂರಿನ ಗಣೇಶ ನಗರದ ಬಳಿ ನಡೆದಿದೆ.
ರಾಣೆಬೆನ್ನೂರು ತಾಲೂಕಿನ ಕೇರಿಮಲ್ಲಾಪುರ ಗ್ರಾಮದ ಮೈಲಪ್ಪ ತಂಬೂರಿ ಎಂಬ ವ್ಯಕ್ತಿ ತನ್ನ ಪತ್ನಿ ಮಹಾದೇವಕ್ಕ ತಂಬೂರಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ನಂತರ ತಾನು ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ನಡು ರಸ್ತೆಯಲ್ಲಿ ದಂಪತಿ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದು, ಇದನ್ನು ನೋಡಿದ ಸ್ಥಳೀಯರು ಕೆಲ ಕಾಲ ಆತಂಕಕ್ಕೆ ಒಳಗಾದರು.
ಮೈಲಪ್ಪ ಮತ್ತು ಮಹಾದೇವಕ್ಕ ಕಳೆದ ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದು, ಕಳೆದ ಒಂದು ವರ್ಷದಿಂದ ಕೌಟುಂಬಿಕ ಕಲಹದ ಹಿನ್ನೆಲೆ ದೂರವಾಗಿದ್ದರು. ಈ ಹಿನ್ನೆಲೆಯಲ್ಲಿ ಹೆಂಡತಿಯನ್ನು ಕೊಲೆ ಮಾಡಲು ಪತಿ ಮುಂದಾಗಿದ್ದಾನೆ ಎನ್ನಲಾಗಿದೆ.
ಸದ್ಯಕ್ಕೆ ಇಬ್ಬರನ್ನೂ ದಾವಣಗೆರೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ರಾಣೆಬೆನ್ನೂರು ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.