ನವದೆಹಲಿ: 46 ನಕಲಿ ಕಂಪನಿಗಳನ್ನು ನಡೆಸುತ್ತಿದ್ದ ಮತ್ತು ಸುಮಾರು 82.23 ಕೋಟಿ ರೂಪಾಯಿಯ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಸೃಷ್ಟಿಸಿದ್ದ ಆರೋಪದಲ್ಲಿ ಓರ್ವನನ್ನು ಜಿಎಸ್ಟಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಹಣಕಾಸು ಇಲಾಖೆ ಸೋಮವಾರ ಮಾಹಿತಿ ನೀಡಿದೆ.
ದೆಹಲಿ ಪೂರ್ವ ವಲಯದ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಆರೋಪಿಯಾದ ಅರವಿಂದ್ ಕುಮಾರ್ನನ್ನು ಬಂಧಿಸಿದ್ದಾರೆ. ತನಿಖೆಯ ನಂತರ ಆತನ 46 ನಕಲಿ ಕಂಪನಿಗಳ ಬಗ್ಗೆ ಮಾಹಿತಿ ಹೊರಬಂದಿದೆ. ಇವುಗಳನ್ನು ಅರವಿಂದ್ ಕುಮಾರ್ ಹಾಗೂ ಅವರ ಸಹಚರರು ನಿರ್ವಹಿಸುತ್ತಿದ್ದರೆಂದು ತಿಳಿದುಬಂದಿದೆ.
ಅರವಿಂದ್ ಹಾಗೂ ಅವರ ಸಹಚರರು ಹೊಂದಿದ ಕಂಪನಿಗಳಲ್ಲಿ ಯಾವುದೇ ವ್ಯವಹಾರ ನಡೆಯುತ್ತಿರಲಿಲ್ಲ. ನಕಲಿ ಐಟಿಸಿಗಳನ್ನು ರಚಿಸುವ ಸಲುವಾಗಿ ಕಂಪನಿಗಳನ್ನು ಸೃಷ್ಟಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗೌಪ್ಯತಾ ನೀತಿ ಒಪ್ಪಲು ಆಗದಿದ್ದರೆ ವಾಟ್ಸ್ಆ್ಯಪ್ ಬಳಸಬೇಡಿ; ದೆಹಲಿ ಹೈಕೋರ್ಟ್
ಒಟ್ಟು 541.1 ಕೋಟಿ ರೂಪಾಯಿಗಳ ಬಿಲ್ಲಿಂಗ್ ಮೂಲಕ 82.23 ಕೋಟಿ ರೂಪಾಯಿಯ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೃಷ್ಟಿಸಿದ್ದು, ಈ ಮೊತ್ತ ಇನ್ನೂ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಮೊತ್ತ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
2017ರಿಂದ ಅರವಿಂದ್ ಕುಮಾರ್ ಈ ಮೋಸದ ಜಾಲ ನಡೆಸುತ್ತಿದ್ದು, ಜನವರಿ 15 ಮತ್ತು 17ರಂದು 21 ಸ್ಥಳಗಳಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಈಗ ಆರೋಪಿ ಅರವಿಂದ್ನನ್ನು ಜನವರಿ 31ರವರೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.