ರಾಮನಗರ : ಕಳೆದ ಮೂರು ದಿನಗಳ ಹಿಂದೆ ಗ್ರಾಮ ಪಂಚಾಯತ್ ಸದಸ್ಯನ ಭೀಕರ ಹತ್ಯೆ ನಡೆದಿತ್ತು. ಈ ಕೊಲೆ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ಕೊಲೆಯ ಹಿಂದಿನ ಜಾಡು ಹಿಡಿದು ಹೊರಟ ಬಿಡದಿ ಪೊಲೀಸರು 6 ಮಂದಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಗ್ರಾಪಂ ಸದಸ್ಯನ ಕೊಲೆ ಕೇಸ್ ಬೇಧಿಸಿದ ಬಿಡದಿ ಪೊಲೀಸರು : ಬಿಡದಿ ಹೋಬಳಿಯ ಮುತ್ತುರಾಯನಗುಡಿ ಪಾಳ್ಯ ಗ್ರಾಮದ ಕುಮಾರ್ ಎಂಬುವನನ್ನ ಹೆಜ್ಜಾಲದ ಬಳಿಯ ನಡು ರಸ್ತೆಯಲ್ಲಿ ಹಂತಕರು ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆಯಾದ ಕುಮಾರ್ ಬನ್ನಿಕುಪ್ಪೆ ಗ್ರಾಮ ಪಂಚಾಯತ್ ಸದಸ್ಯನಾಗಿ ಆಯ್ಕೆಯಾಗಿದ್ದ.
ಗ್ರಾಮದಲ್ಲಿಯೂ ಜನರಿಗೆ ಸಣ್ಣಪುಟ್ಟ ಸಹಾಯ ಮಾಡಿಕೊಂಡಿದ್ದ ಈತ, ಕಾರ್ಯ ನಿಮಿತ್ತ ಬಿಡದಿ ಕಡೆ ಬರುತ್ತಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕುಮಾರ್‌ನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕೊಲೆ ಪ್ರಕರಣ ದಾಖಲು ಮಾಡಿಕೊಂಡ ಬಿಡದಿ ಪೊಲೀಸರು ಹಂತಕರ ಜಾಡು ಹಿಡಿದು ಹೊರಟಿದ್ದರು. ಮೊದಲಿಗೆ ಕೊಲೆಯಾದ ಕುಮಾರ್‌ಗೆ ಯಾರಾದರೂ ದಾಯಾದಿಗಳು ಇದ್ದರೆ ಎಂಬುದನ್ನ ಪತ್ತೆ ಹಚ್ಚಿದ್ದರು.
ಈ ವೇಳೆ ಕಳೆದ 15 ದಿನಗಳ ಹಿಂದೆ ಕೊಲೆಯಾದ ಕುಮಾರ್ ನನಗೆ ಜೀವ ಬೆದರಿಕೆ ಇದೆ ಎಂದು 4-5 ಜನರ ಹೆಸರು ಬರೆದು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನಲ್ಲಿ ನೀಡಿದ್ದ 4-5 ಮಂದಿಯನ್ನ ಠಾಣೆಗೆ ಕರೆಸಿ ವಿಚಾರಣೆ ಮಾಡಿದ್ದಾರೆ.
ಪೊಲೀಸರ ವಿಚಾರಣೆಯಲ್ಲಿ ಕೊಲೆಯಾದ ಕುಮಾರ್ ಚಿಕ್ಕಮ್ಮನ ಮಗ ಕುಮಾರ್ ಈ ಕೊಲೆ ಮಾಡಿರುವುದಾಗಿ ತಿಳಿದು ಬಂದಿತ್ತು. ಪ್ರಕರಣದ ಪ್ರಮುಖ ಆರೋಪಿ ಕುಮಾರ್ ಸೇರಿದಂತೆ ಶ್ರೀನಿವಾಸ್, ಶಾಂತರಾಜು, ರಾಜೇಶ್, ಸುನೀಲ್, ಶ್ರೀಧರನನ್ನ ಬಂಧಿಸಿದ್ದರು.
ವಿಚಾರಣೆ ನಡೆಸಲಾಗಿ ಕೊಲೆಯಾದ ಕುಮಾರ್ ಹಾಗೂ ಕೊಲೆ ಮಾಡಿದ ಕುಮಾರ್ ಸಂಬಂಧಿಕರಾಗಿದ್ದರು. ಇಬ್ಬರ ನಡುವೆ ಹಣ ಹಾಗೂ ಜಮೀನು ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಇದರ ವಿಚಾರವಾಗಿ ಕುಮಾರ್ ಕೊಲೆ ನಡೆದಿತ್ತು.
ದಯಾದಿಗಳ ಕಲಹ ಕೊಲೆಯಲ್ಲಿ ಅಂತ್ಯ ಕಂಡಿದೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಮಾರಕಾಸ್ತ್ರಗಳನ್ನ ವಶಕ್ಕೆ ಪಡೆಯಲಾಗಿದೆ.