ಲಖನೌ: ಉತ್ತರ ಪ್ರದೇಶದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಬೀಳುವಂತೆ ಕಾಣ್ತಿಲ್ಲ. ಕೆಲವು ದಿನಗಳ ಹಿಂದಷ್ಟೇ ದಲಿತ ಯುವಕನ ಮೇಲೆ ಹಲ್ಲೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿ, ಆಡಳಿತ-ಪ್ರತಿ ಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗಿತ್ತು.
ಇದರ ಬೆನ್ನಲ್ಲೇ ಇದೇ ಯುಪಿಯಲ್ಲಿ ವ್ಯಕ್ತಿಯೊರ್ವ ಬಾಲಕಿ ಮೇಲೆ ಪೆಟ್ರೋಲ್ ಸುರಿದು ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಬುಲಂದ್‌ಶಹರ್ ಜಿಲ್ಲೆಯ ಮುಂಡಖೇಡ ಪ್ರದೇಶದಲ್ಲಿ ಘಟನೆ ನಡೆದಿದ್ದು, ತೀವ್ರವಾಗಿ ಗಾಯಗೊಂಡಿರುವ ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಸ್ಥಿತಿ ಚಿಂತಾಜನವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೃತ್ಯದ ಬಳಿಕ ಆರೋಪಿ ಪರಾರಿಯಾಗಿದ್ದಾನೆ.
ತಮ್ಮ ಮನೆ ಮುಂದೆ ಇರುವ ಹಸುವಿನ ಸಗಣಿಯನ್ನು ತೆಗೆಯುವಂತೆ ಆರೋಪಿ ಬಾಲಕಿಯನ್ನು ಕರೆದಿದ್ದಾನೆ. ಇದೇ ವಿಚಾರವಾಗಿ ಸುಮ್ಮನೆ ವಾಗ್ವಾದಕ್ಕಿಳಿದು ಆಕೆಯ ಮೇಲೆ ಪೆಟ್ರೋಲ್ ಸುರಿದು ಹತ್ಯೆಗೆ ಯತ್ನಿಸಲಾಗಿದೆ. ಬಾಲಕಿ ಜೋರಾಗಿ ಕಿರುಚುವುದನ್ನು ಕಂಡ ನೆರೆ ಹೊರೆಯವರು ಕೂಡಲೇ ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಈ ವೇಳೆ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಸಂತ್ರಸ್ತೆಯ ಸಂಬಂಧಿಕರು ಆರೋಪಿಸಿದ್ದಾರೆ.
ಈ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಗಾಗಿ ಬಲೆಬೀಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಪ್ರೇಮ ವೈಫಲ್ಯದಿಂದ ಕೃತ್ಯ ನಡೆದಿದೆ. ಸಂಪೂರ್ಣ ತನಿಖೆ ಬಳಿಕ ಘಟನೆಗೆ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.