ಡುಂಗರಪುರ: ಬಿಚಿವಾಡಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಜಸ್ಥಾನ-ಗುಜರಾತ್‌ನ ರತನ್‌ಪುರ ಗಡಿಯಲ್ಲಿ ತಪಾಸಣೆ ನಡೆಸುವಾಗ ಅಕ್ರಮವಾಗಿ ಕಾರಿನಲ್ಲಿ 4.5 ಕೋಟಿ ರೂ. ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ರತನ್‌ಪುರ ಗಡಿಯಲ್ಲಿ ಉದಯಪುರದಿಂದ ಬರುತ್ತಿದ್ದ ಕಾರು ತಡೆದು ಶೋಧ ಕಾರ್ಯ ನಡೆಸಲಾಯಿತು. ಕಾರಿನ ಆಸನಗಳ ಕೆಳಗೆ ರಹಸ್ಯ ಕ್ಯಾಬಿನ್ನಲ್ಲಿ ಕಂತೆ-ಕಂತೆ ನೋಟುಗಳನ್ನು ಇರಿಸಿದ್ದರು. ಕಾರಿನಲ್ಲಿದ್ದ ಪ್ರಯಾಣಿಕರಿಬ್ಬರಿಗೂ ನಗದು ಬಗ್ಗೆ ಪ್ರಶ್ನಿಸಿದ್ದಾಗ ಸರಿಯಾದ ಉತ್ತರ ನೀಡದೆ ತಡಬಡಿಸಿದರು. ತಕ್ಷಣವೇ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆತರಲಾಯಿತು ಎಂದು ಬಿಚಿವಾಡಾ ಪೊಲೀಸ್ ಠಾಣೆ ಅಧಿಕಾರಿ ಮೊಹಮ್ಮದ್ ರಿಜ್ವಾನ್ ಖಾನ್ ಹೇಳಿದ್ದಾರೆ.
ನೋಟುಗಳು ತುಂಬಿದ ಕಾರು ಹಾಗೂ ಕಾರಿನಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಕಾರಿನಲ್ಲಿ ಒಟ್ಟು 4 ಕೋಟಿ 49 ಲಕ್ಷ ರೂ. ನಗದು ಸಿಕ್ಕಿದೆ. ಬಂಧಿತರಲ್ಲಿ ಓರ್ವ ಗುಜರಾತ್ ಪಟಾನ್ ನಿವಾಸಿ ರಂಜಿತ್ ರಜಪೂತ್ ಮತ್ತು ಮತ್ತೋರ್ವ ಉಂಜಾ ನಿವಾಸಿ ನಿತಿನ್ ಪಟೇಲ್ ಎಂದು ತಿಳಿದುಬಂದಿದೆ.
ಆರೋಪಿಗಳು ಹಣವನ್ನು ದೆಹಲಿಯಿಂದ ಗುಜರಾತಿಗೆ ಸಾಗಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದು ಹವಾಲಾ ವ್ಯವಹಾರಕ್ಕೆ ಸಂಬಂಧಿಸಿದೆ ಎಂದು ಪೊಲೀಸರು ಶಂಕಿಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.