ಬೆಂಗಳೂರು: ಎರಡು ವರ್ಷಗಳ ಹಿಂದೆ ನಡೆದಿದ್ದ ಗಲಾಟೆ ಸಂಬಂಧ ನ್ಯಾಯಾಲಯದ ಸೂಚನೆ ಮೇರೆಗೆ ನಟಿ ಸಂಜನಾ ಗಲ್ರಾನಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ : ಬೇಲ್ ಸಿಕ್ಕಿದ ಬಳಿಕ ಸಂಜನಾ ಎಲ್ಲಿದ್ದಾರೆ!?
2019ರ ಡಿಸೆಂಬರ್ 24 ರಂದು ಕ್ಲಬ್ವೊಂದರಲ್ಲಿ ನಿರ್ಮಾಪಕಿ ವಂದನಾ ಜೈನ್ ಹಾಗೂ ಸಂಜನಾ ಗಲ್ರಾನಿ ನಡುವೆ ಗಲಾಟೆಯಾಗಿತ್ತು. ಇದನ್ನು ಉಲ್ಲೇಖಿಸಿ ವಂದನಾ ನ್ಯಾಯಾಲಯದಲ್ಲಿ ಖಾಸಗಿ ದೂರು (ಪಿಸಿಆರ್) ಸಲ್ಲಿಸಿದ್ದರು. ವಾದ-ಪ್ರತಿವಾದ ಬಳಿಕ ಅಂತಿಮವಾಗಿ ಸಂಜನಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರ್ಟ್ ಸೂಚನೆ ನೀಡಿದ ಹಿನ್ನೆಲೆ, ಮೇ 12 ರಂದು ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ:
ಎರಡು ವರ್ಷಗಳ ಹಿಂದೆ ಲ್ಯಾವೆಲ್ಲೆ ರಸ್ತೆಯ ಕೋಝಿ ಬಾರ್ಗೆ ನಿರ್ಮಾಪಕಿ ವಂದನಾ ಜೈನ್ ಹಾಗೂ ಸಂಜನಾ ಗಲ್ರಾನಿ ಭೇಟಿ ನೀಡಿದ್ದರು. ನಿರ್ಮಾಪಕಿ ವಂದನಾ ಬಾರ್ನಲ್ಲಿ ಪಾರ್ಟಿಯಲ್ಲಿ ಕೂಡ ಭಾಗಿಯಾಗಿದ್ದರು. ಈ ವೇಳೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆಯಾಗಿತ್ತು. ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಈ ವೇಳೆ ಸಂಜನಾ ವಿಸ್ಕಿ ಎರಚಿ ವಂದನಾ ಮೇಲೆ ಬಲಪ್ರಯೋಗ ಮಾಡಿದ್ದರು ಎಂದು ಆರೋಪಿಸಲಾಗಿತ್ತು.
ಘಟನೆ ಸಂಬಂಧ ವಂದನಾ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ವಾದ-ಪ್ರತಿವಾದ ಬಳಿಕ ಕೋರ್ಟ್ ಸೂಚನೆ ಹಿನ್ನೆಲೆ ನಟಿ ವಿರುದ್ದ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಈಗ್ಗೆ ಕೆಲ ದಿನಗಳ ಮುಂಚೆ ಸಂಜನಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಸದ್ಯ ನ್ಯಾಯಾಲಯದಲ್ಲಿ ಜಾಮೀನು ಪಡೆದ ಸಂಜನಾ ಹೊರಗೆ ಬಂದಿದ್ದಾರೆ.