ಪೋರ್ಟ್ ಬ್ಲೇರ್: ಪ್ರತಿಷ್ಠಿತರು ಆರೋಪಿಯಾಗಿರುವ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಡಮಾನ್ ಮತ್ತು ನಿಕೋಬಾರ್ ಪೊಲೀಸರು ಹರಿಯಾಣದಲ್ಲಿ ಪೋರ್ಟ್ ಬ್ಲೇರ್ ಮೂಲದ ಉದ್ಯಮಿಯೊಬ್ಬರನ್ನು ಬಂಧಿಸಿದ್ದಾರೆ ಎಂದು ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಲೆಮರೆಸಿಕೊಂಡಿದ್ದ ಆರೋಪಿ ಸಂದೀಪ್ ಸಿಂಗ್ ಅಲಿಯಾಸ್ ರಿಂಕು ಎಂಬಾತನನ್ನು ಭಾನುವಾರ ರಾತ್ರಿ ಬಂಧಿಸಲಾಗಿದೆ. ಆರೋಪಿ ಸಂದೀಪ್ ಹರಿಯಾಣದಲ್ಲಿ ಮಾಡಿದ ಬ್ಯಾಂಕ್ ವಹಿವಾಟಿನ ಮೂಲಕ ಪೊಲೀಸರಿಗೆ ಆತನ ಸುಳಿವು ಸಿಕ್ಕಿತ್ತು. ತಕ್ಷಣವೇ, ಅಂಡಮಾನ್ ಮತ್ತು ನಿಕೋಬಾರ್ ಪೊಲೀಸರು ಹರಿಯಾಣ ಮತ್ತು ದೆಹಲಿ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿ ಹೇಳಿದರು.
ಆದರೆ, ಪೊಲೀಸರು ಹರಿಯಾಣದಲ್ಲಿ ಆರೋಪಿಯನ್ನು ಹಿಡಿದ ಸ್ಥಳದ ವಿವರಗಳನ್ನು ನೀಡಿಲ್ಲ. 21 ವರ್ಷದ ಮಹಿಳೆಯ ಮೇಲಿನ ಈ ಅತ್ಯಾಚಾರ ಪ್ರಕರಣದಲ್ಲಿ ಅಂಡಮಾನ್ ಮತ್ತು ನಿಕೋಬಾರ್ನ ಮಾಜಿ ಮುಖ್ಯ ಕಾರ್ಯದರ್ಶಿ ಜಿತೇಂದ್ರ ನಾರಾಯಣ್ ಓರ್ವ ಆರೋಪಿಯಾಗಿದ್ದಾರೆ.
ಆರೋಪಿಗಳ ಪತ್ತೆಗೆ 1 ಲಕ್ಷ ರೂ ಬಹುಮಾನ ಘೋಷಿಸಿದ್ದ ಕಾರ್ಮಿಕ ಇಲಾಖೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಡಮಾನ್ ಮತ್ತು ನಿಕೋಬಾರ್ ಪೊಲೀಸರು ನವೆಂಬರ್ 2 ರಂದು ಸಂದೀಪ್ ಸಿಂಗ್ ಅಲಿಯಾಸ್ ರಿಂಕು ಮತ್ತು ಕಾರ್ಮಿಕ ಆಯುಕ್ತ ಆರ್‌ಎಲ್ ರಿಷಿಗೆ ಇವರನ್ನು ಹಿಡಿದು ಕೊಟ್ಟವರಿಗೆ ತಲಾ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳಾದ ನರೇನ್ ಮತ್ತು ಸಿಂಗ್ ಅವರನ್ನು ಬಂಧಿಸಲಾಗಿದ್ದು, ರಿಷಿ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ತನಿಖೆಗಾಗಿ ಆರೋಪಿ ಸಂದೀಪ್ ಸಿಂಗ್ ಈತನನ್ನು ಪೋರ್ಟ್ ಬ್ಲೇರ್‌ಗೆ ಕರೆತರಲಾಗುತ್ತಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ 21 ವರ್ಷದ ಮಹಿಳೆಯನ್ನು ಸರ್ಕಾರಿ ಉದ್ಯೋಗದ ಭರವಸೆ ನೀಡಿ ಮುಖ್ಯ ಕಾರ್ಯದರ್ಶಿಯ ಮನೆಗೆ ಕರೆದೊಯ್ದು ನಂತರ ಅಲ್ಲಿ ನರೇನ್ ಸೇರಿದಂತೆ ಉನ್ನತ ಅಧಿಕಾರಿಗಳು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ.
ಮಹಿಳೆ ಮೇಲೆ ಅತ್ಯಾಚಾರ ಎಸೆಗಿರುವ ಆರೋಪ: ಆರ್.ಎಲ್. ರಿಷಿ ಈತನ ಮೇಲೆ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವ ಆರೋಪ ಹೊರಿಸಲಾಗಿದ್ದು, ಉದ್ಯಮಿ ರಿಂಕು ಅಪರಾಧದಲ್ಲಿ ಸಹಭಾಗಿ ಎಂದು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಅಕ್ಟೋಬರ್ 1 ರಂದು ದೆಹಲಿ ಹಣಕಾಸು ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನಾರಾಯಣ್ ನೇಮಕಗೊಂಡ ದಿನವೇ ಎಫ್ಐಆರ್ ದಾಖಲಿಸಲಾಗಿದೆ. ಅಕ್ಟೋಬರ್ 17 ರಂದು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರ ಅವರನ್ನು ಅಮಾನತುಗೊಳಿಸಿದೆ.
ಇದನ್ನೂ ಓದಿ: ಮದರಸಾ ಪ್ರಾಂಶುಪಾಲರಿಂದ ಆರನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ ಆರೋಪ